'ಕೃಷಿ ಸಂಪದ' ಎರಡನೇ ಸಂಚಿಕೆ

'ಕೃಷಿ ಸಂಪದ' ಎರಡನೇ ಸಂಚಿಕೆ ನಿಮ್ಮ ಮುಂದಿದೆ. ಈ ಸಂಚಿಕೆಗೆ ದುಡಿದ, ಸಮಯ ನೀಡಿದ ಎಲ್ಲರಿಗೂ ಹೃದ್ಪೂರ್ವಕ ವಂದನೆಗಳು. ಎಂದಿನಂತೆ ನಿಮ್ಮೆಲ್ಲರ ಸಹಭಾಗಿತ್ವ ಬಹುಮುಖ್ಯ.

'ಕೃಷಿ ಸಂಪದ' ಎರಡನೇ ಸಂಚಿಕೆ

(ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಮೇಲೆ ಕ್ಲಿಕ್ ಮಾಡಿ | Click to download the second edition)

ಸಂಪಾದಕರ ಲೇಖನಿಯಿಂದ...

ನಿಮ್ಮೊಂದಿಗೆ

"ಕರುಣೆಯಿಲ್ಲ ಈ ವರುಣನಿಗೆ", "ವರುಣಾಜನಕ ಸ್ಥಿತಿ", "ಇದು ಮಳೆಯಲ್ಲ, ಜಲಪ್ರಳಯ", "ಜಲಚಾಪೆ", "ಈಗ ನೆರವಿನ ನೆರೆ", "ತಗ್ಗಿದ ಮಳೆ, ನಿಲ್ಲದ ಸಾವು-ನೋವು" - ಇವೆಲ್ಲ ಅಕ್ಟೋಬರ್ ೨೦೦೯ರ ಮೊದಲ ವಾರದ ದಿನಪತ್ರಿಕೆಗಳ ಮುಖಪುಟದ ತಲೆಬರಹಗಳು.

ಇವನ್ನೆಲ್ಲ ಓದುತ್ತಿದ್ದಂತೆ ನುಗ್ಗಿ ಬರುತ್ತಿತ್ತು ವಿಷಾದ – ಮಹಾಪೂರದಂತೆ.

ಕರ್ನಾಟಕದಲ್ಲಿ ಆಗಿರುವ ಕಷ್ಟನಷ್ಟದ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಸತ್ತವರು ೨೨೬. ಹಾನಿಯಾದ ಮನೆಗಳು ೫,೨೬,೦೨೨. ಒಟ್ಟು ೪,೨೯೨ ಹಳ್ಳಿಗಳು ನೆರೆಬಾಧಿತ. ಸರಕಾರದ ೧,೭೨೨ ಪರಿಹಾರ ಕೇಂದ್ರಗಳಲ್ಲಿರುವ ನಿರ್ವಸಿತರು ೬,೯೧,೭೭೨.

ನೆರೆ ಪರಿಹಾರಕ್ಕಾಗಿ ಕರ್ನಾಟಕದ ಜನತೆಯಿಂದ ರೂಪಾಯಿ ೭೦೦ ಕೋಟಿ ಸಂಗ್ರಹಿಸಲಾಗಿದೆ. ಕರ್ನಾಟದ ಸರಕಾರ ೨೧೯ ಗ್ರಾಮಗಳನ್ನು ಸ್ಥಳಾಂತರ ಮಾಡಲಿದೆ. ೭೫,೦೦೦ ಕುಟುಂಬಗಳಿಗೆ ಮನೆ ಕಟ್ಟಿ ಕೊಡಬೇಕಾಗಿದೆ. ದೇಶದ ಪ್ರಧಾನಮಂತ್ರಿ, ನೆರೆಪೀಡಿತ ಪ್ರದೇಶಗಳನ್ನು ವಿಮಾನದಲ್ಲಿ ವೀಕ್ಷಿಸಿದ ಬಳಿಕ ೧೦.೧೦.೨೦೦೯ರಂದು ರೂಪಾಯಿ ೧,೦೦೦ ಕೋಟಿ ನೆರವು ಪ್ರಕಟಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಇನ್ನೂ ರೂಪಾಯಿ ೨,೦೦೦ ಕೋಟಿ ಕೇಂದ್ರ ಸರಕಾರದ ನೆರವು ಬೇಕೆಂದಿದ್ದಾರೆ.

ಈ ಕೋಟಿಗಟ್ಟಲೆ ರೂಪಾಯಿ ನೆರೆ ಪರಿಹಾರದ ನೆರವಿನ ಬಗ್ಗೆ ಓದುವಾಗ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಬರೆದ "ಎವ್‍ರಿವನ್ ಲವ್‍ಸ್ ಎ ಗುಡ್ ಡ್ರವ್‍ಟ್" ಪುಸ್ತಕದ ನೆನಪಾಗುತ್ತದೆ. ದೇಶದ ಉದ್ದಗಲದಲ್ಲಿ ೨೦,೦೦೦ ಕಿಮೀ ಸಂಚರಿಸಿ, ಗ್ರಾಮ ಹಾಗೂ ಕುಟುಂಬ ಮಟ್ಟದ ಮಾಹಿತಿ ಸಂಗ್ರಹಿಸಿ ಅವರು ಬರೆದ ಪುಸ್ತಕ ಅದು. ಬರ ಬಂದಾಗ ರಾಜಕಾರಣಿ ಹಾಗೂ ಅಧಿಕಾರಿಗಳ ವಿಷಾದ ತೋರಿಕೆಗೆ ಮಾತ್ರ; ಯಾಕೆಂದರೆ ಬರಪರಿಹಾರದ ಹೆಸರಿನಲ್ಲಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆಯಲಾಗುತ್ತದೆ ಎಂಬುದನ್ನು ಪುರಾವೆಗಳ ಸಹಿತ ದಾಖಲಿಸಿದ್ದಾರೆ ಪಿ. ಸಾಯಿನಾಥ್. ಈಗಿನ ನೆರೆನೆರವು ಹಾಗೆ ಸೋರಿ ಹೋಗದಿರಲಿ ಎಂದು ಹಾರೈಸೋಣ. ಕೇವಲ ಹಾರೈಸಿದರೆ ಸಾಲದು. ನಮ್ಮನಮ್ಮ ನೆಲೆಯಲ್ಲಿ ನೆರೆಪರಿಹಾರದ ಹಣ ಸದ್ವಿನಿಯೋಗ ಆಗಲಿಕ್ಕಾಗಿ ಏನೆಲ್ಲ ಮಾಡಲು ಸಾಧ್ಯವಿದೆಯೋ ಅವನ್ನೆಲ್ಲ ಮಾಡೋಣ.

ಇವೆಲ್ಲ ಭರಾಟೆಯಲ್ಲಿ ಒಂದು ಪ್ರಶ್ನೆ ಮನ ಕಲಕುತ್ತಲೇ ಇದೆ. ಈ ಮಹಾಪೂರದಿಂದಾದ ಹಾನಿಗೆ ಎಷ್ಟರ ಮಟ್ಟಿಗೆ ನಿಸರ್ಗ ಕಾರಣ ಹಾಗೂ ಎಷ್ಟರ ಮಟ್ಟಿಗೆ ಮನುಷ್ಯ ಕಾರಣ? ಅಂದರೆ, ಇದರಲ್ಲಿ ಅಧಿಕಾರಿಗಳಿಂದಾದ ಕರ್ತವ್ಯಲೋಪ ಎಷ್ಟಿದೆ? ..... ಈ ವಿಷಯದ ಬಗ್ಗೆ ಒಬ್ಬ ರಾಜಕೀಯ ನಾಯಕರು ಮಾತ್ರ ಸೊಲ್ಲು ಎತ್ತಿದ್ದಾರೆ. ಮಂಗಳೂರಿನ ಒಬ್ಬರಿಗೆ ಕರ್ನೂಲಿನ ಮಿತ್ರರೊಬರು ಕಳಿಸಿದ ಇ-ಮೈಲಿನಲ್ಲಿ ಹೀಗೆಂದಿದ್ದಾರೆ, "ಸುಮಾರು ಏಳು ದಿನ ಮುಂಚಿತವಾಗಿ ಕ್ರಮದಂತೆ ಅಣೆಕಟ್ಟಿನ ಅಧಿಕಾರಿಗಳು ನೆರೆ ಬಗ್ಗೆ ಎಚ್ಚರಿಕೆಯ ಸೂಚನೆ ಕಳಿಸಿದ್ದರೂ, ನಾಗರಿಕ ಅಧಿಕಾರಿಗಳು ಉಡಾಫೆ ಮಾಡಿದರು." ಈಗಿನ ಇಂಟರ‍್ನೆಟ್ - ಮೊಬೈಲ್ ಫೋನ್ ಯುಗದಲ್ಲಿ ಜನರಿಗೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಲು ಸಾಧ್ಯವಿತ್ತು. ಅಧಿಕಾರಿಳು ತಮ್ಮ ಕರ್ತವ್ಯ ನಿರ್ವಹಿಸಿದ್ದರೆ, ಎಷ್ಟೋ ಜೀವಹಾನಿ , ಸೊತ್ತುಹಾನಿ ತಪ್ಪಿಸಬಹುದಾಗಿತ್ತು.

ಪ್ರಕೃತಿಯನ್ನು ಮಾನವ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಪ್ರಕೃತಿಯಿಂದ ಪಾಠ ಕಲಿಯಲು ಸಾಧ್ಯವಿದೆ. ಇನ್ನಾದರೂ ಕಲಿಯೋಣ.

- ಅಡ್ಡೂರು ಕೃಷ್ಣ ರಾವ್