ಅಭಿವೃದ್ಧಿ ಮತ್ತು ಜೀವನೋಪಾಯ ಸಂರಕ್ಷಣೆ
ಅಭಿವೃದ್ಧಿ, ಪ್ರಗತಿ, ಬೆಳವಣಿಗೆ... ಇವೆಲ್ಲವೂ ಸ್ವಾತಂತ್ರ್ಯದ ನಂತರ ನಾವು ಬಳಸುತ್ತಾ ಬಂದಿರುವ ಬೀಜಮಂತ್ರಗಳು. ಬಹಳವಾಗಿ ಬಳಕೆಯಲ್ಲಿದ್ದರೂ, ಉಪಯೋಗಿಸಿವಾಗ ಇವುಗಳ ಪೂರ್ಣವಾದ ಅರ್ಥವನ್ನು ಗ್ರಹಿಸದೇ ಅರ್ಥವನ್ನು ಸಂಕುಚಿತವಾಗಿ ನೋಡುವುದೇ ಹೆಚ್ಚು. ಅಭಿವೃದ್ಧಿ ಎನ್ನುವುದನ್ನು ಕೇವಲ ಆರ್ಥಿಕ ಬೆಳವಣಿಗೆ, ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಈ ಎರಡು ವಿಷಯಗಳಲ್ಲಿ ಸರ್ಕಾರ ಅಥವ ರಾಜಕೀಯ ನಾಯಕರು ನಿರ್ಧರಿಸುವ ಗುರಿಗಳನ್ನು ಮುಟ್ಟಲು ಬೇಕಾಗಿರುವ ಸೌಕರ್ಯಗಳನ್ನು ಒದಗಿಸುವ ಪರಿಕ್ರಿಯೆ ಎಂದೇ ಅರ್ಥೈಸಲಾಗಿದೆ. ನಮ್ಮಲ್ಲಿರುವ ಸಾಮಾಜಿಕ ಮತ್ತು ನೈಸರ್ಗಿಕ ಸಂಪತ್ತು ಈ ಮಟ್ಟದ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾದೀತೆ ಅಥವ ಸಧ್ಯಕ್ಕೆ ಇವುಗಳ ಪೂರೈಕೆ ಆಗುತ್ತಿದ್ದರೂ ಮುಂದೆಯೂ ಕೂಡ ಇದೇ ಮಟ್ಟದ ಪೂರೈಕೆ ಸಾಧ್ಯವೇ ಎಂಬುದರ ಬಗ್ಗೆ ಸಾಕಷ್ಟು ಚಿಂತನೆ ನಮ್ಮಲ್ಲಿ ಆಗುತ್ತಿಲ್ಲ. ಅಂದರೆ, ಅಭಿವೃದ್ಧಿ, ಪ್ರಗತಿ ಮತ್ತಿತರ ಪದಗಳ ಕಲ್ಪನೆಯು ಕೇವಲ ನಮ್ಮ ಸಮಾಜದ ಬೇಡಿಕೆ (demand)ಗಳನ್ನು ಪ್ರತಿಬಿಂಬಿಸುತ್ತಿವೆಯೇ ಹೊರತು ನಮ್ಮ ಸಮಾಜದ ಪೂರೈಕೆಯ(supply) ಮಟ್ಟಗಳನ್ನಲ್ಲ. ಈ ಪೂರೈಕೆಯಲ್ಲಿ ತೊಂದರೆಯಾದಾಗ ನೋಡಿಕೊಂಡರಾಯಿತು ಎನ್ನುವ ತಾತ್ಕಾಲಿಕ ನೀತಿಯನ್ನೇ ಯೋಜನೆ ಮತ್ತು ರಾಜಕೀಯ ವಲಯಗಳಲ್ಲಿ ಅಳವಡಿಸಿಕೊಂಡಿದ್ದೇವೆ. ಸಮಾಜವೂ ಕೂಡ ಈ ವಿಷಯದಲ್ಲಿ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ೫೦ ವರ್ಷಗಳ ಈ ಮುಂದೆ ತಳ್ಳುವ ನೀತಿಯನ್ನು ಪ್ರತಿಯೊಂದು ಪಂಚವಾರ್ಷಿಕ ಯೋಜನೆಗಳಲ್ಲೂ ಕಾಣಬಹುದು. ತತ್ ಕ್ಷಣದ ಐದು ವರ್ಷಗಳಿಗಷ್ಟೇ ನಮ್ಮ ಮುಂದಾಲೋಚನೆ ಸೀಮಿತವಾದಂತೆ ತೋರುತ್ತದೆ. ನಾವು ಪ್ರಗತಿಪಥದಲ್ಲಿದ್ದೂ ದೇಶದ ಹಲವು ವರ್ಗಗಳು ಅನುಭವಿಸುತ್ತಿರುವ ಬವಣೆಗೆ ನಮ್ಮ ದೇಶದ ನೀತಿಗಳಲ್ಲಿ ಅಭಿವೃದ್ಧಿ, ಪ್ರಗತಿಗಳ ಈ ಸಂಕುಚಿತ ಕಲ್ಪನೆಯೂ ಕಾರಣವಿರಬಹುದು.
ಭೂ ಬಳಕೆಯ ಕಾಯ್ದೆಗಳು ಮತ್ತು ನೀತಿಗಳನ್ನು ಗಮನಿಸಿ. ನಾವು ಭವಿಷ್ಯದ ಬಗ್ಗೆ, ಸಮಾಜದ ಎಲ್ಲಾ ವರ್ಗಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಸಧ್ಯಕ್ಕೆ ಪ್ರಗತಿಯನ್ನು ಸಾಧಿಸಲು ಹಲವು ನೀತಿಗಳನ್ನು ರೂಪಿಸಿಕೊಂಡಿದ್ದೇವೆ. ಈ ನೀತಿಗಳು ಒಂದು ಬಗೆಯ ಭೂ ಬಳಕೆಯನ್ನು (ಉದಾಹರಣೆಗೆ ಕೃಷಿ)ಯನ್ನು ಅನಾಮತ್ತಾಗಿ ಇನ್ನೊಂದು ಬಗೆಯ ಬಳಕೆಯನ್ನಾಗಿ ಬದಲಿಸಲು ಸರ್ಕಾರಕ್ಕೆ ಅನುಮತಿ ನೀಡುತ್ತದೆ (ಉದಾಹರಣೆಗೆ ವಿಶೇಷ ಆರ್ಥಿಕ ವಲಯ). ಈ ಬಗೆಯ ಬದಲಾವಣೆಯಲ್ಲಿ, ಹಿಂದೆ ಯಾರು ಈ ಭೂ ಬಳಕೆಯಲ್ಲಿ ನಿರತರಾಗಿದ್ದರೋ ಅವರು ಮಾರನೆಯ ದಿವಸವೇ ಆ ಭೂಮಿಯ ಬಳಕೆಯನ್ನು ಮಾಡುವಂತಿಲ್ಲ. ಆ ಭೂಮಿಯಲ್ಲಾಗುತ್ತಿರುವ "ಪ್ರಗತಿ"ಯಲ್ಲಿ ಇವರ ಪಾಲಿಲ್ಲ. ಅವರಿಗೆ ತಾತ್ಕಾಲಿಕವಾಗಿ ಪರಿಹಾರ ದೊರೆಯುವುದಾದರೂ, ಅವರ ಭವಿಷ್ಯದ ಜೀವನೋಪಾಯಕ್ಕೆ ಸುಸ್ಥಿರವಾದ ಸಂರಕ್ಷಣೆಯನ್ನು ಯಾವ ನೀತಿಗಳು ಕಾಯ್ದಿರಿಸುವುದಿಲ್ಲ. ನಮ್ಮ ಇಡೀ ಸಮಾಜವೇ ಇಲ್ಲಾಗುತ್ತಿರುವ ತಾತ್ಕಾಲಿಕ ಬದಲಾವಣೆಯನ್ನಷ್ಟೇ ಗಮನಿಸುತ್ತಿದೆಯೇ ವಿನಹ ಜೀವನೋಪಾಯವನ್ನೇ ಕಳೆದುಕೊಂಡ ವರ್ಗಕ್ಕೆ ಈ ತರಹದ ಪ್ರಗತಿ ಬೇಕಿತ್ತೇ ಅಥವ ಇಂದಿನ ಪರಿಸ್ಥಿತಿಯಲ್ಲಿ ಇವರು ಪ್ರಗತಿಯನ್ನು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ಯೋಚಿಸುವುದೇ ಇಲ್ಲ.
ತಾತ್ಕಾಲಿಕವಾಗಿ ಆಹಾರ ಪೂರೈಕೆಯಲ್ಲಿ ಕೊರತೆಯಾದ ತಕ್ಷಣ ನಮಗೆ ಹಸಿರುಕ್ರಾಂತಿಯ ತಂತ್ರಜ್ಞಾನ, ಅದಕ್ಕೆ ಬೇಕಾದಂತ ಕೃಷಿ ನೀತಿಗಳು ಅವಶ್ಯವಾಯಿತು, ಅನುಷ್ಠಾನಕ್ಕೂ ಬಂತು. ಮುಂದೆ ಇದೇ ತಂತ್ರಜ್ಞಾನ, ಕೃಷಿ ನೀತಿ ನಮ್ಮ ಪರಿಸರಕ್ಕಾಗಲೀ, ಭೂಮಿ ನೀರಿಗಾಗಲೀ ಸರಿಪಡಿಸಲಾಗದ ಹಾನಿಯನ್ನು ಮಾಡಿದರೆ ಎಂಬ ಪ್ರಶ್ನೆ ಆಗ ಬರದೇ, ಈಗ ತೊಂದರೆಗಳು ವಾಸ್ತವದಲ್ಲಿ ನಮ್ಮ ಬೆನ್ನ ಹಿಂದೆ ಬಿದ್ದಿರುವಾಗ, ನಾವು ಈ ಪ್ರಶ್ನೆಗಳಿಗೆ ಉತ್ತರವಿದೆಯೇ ಎಂದು ಯೋಚಿಸುತ್ತಿದ್ದೇವೆ. ಆದರೆ ನಮ್ಮ ಯೋಜನೆಗಳು, ನೀತಿಗಳು ಮೇಲೆ ಹೇಳಿದಂತೆ ಈಗಾಗಲೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿಯಾಗಿದೆ. ಇಂದು ನಾವು ಕಾಣುತ್ತಿರುವ ಬದಲಾವಣೆಗಳು ಇನ್ನೊಂದು ೨೦ - ೩೦ ವರ್ಷಗಳಿಗಾಗುವಷ್ಟು ಕಷ್ಟಗಳನ್ನು ನಮ್ಮ ತಲೆಗಾಗಲೇ ಹತ್ತಿಸಿಯಾಗಿದೆ.
ಇಂದು ಇಂಧನ, ವಿದ್ಯುಚ್ಛಕ್ತಿ, ಮೂಲಭೂತ ಸೌಕರ್ಯಗಳೇ ನಮ್ಮ ಪ್ರಗತಿಯಲ್ಲಿರುವ ದೇಶದ ಅವಶ್ಯಕತೆ. ಅದಕ್ಕಾಗಿ ಕಂಡಲ್ಲೆಲ್ಲ ಹಿಂದು ಮುಂದು ನೋಡದೇ ಕೈಗಾರಿಕೆಗಳು, ಶಕ್ತಿಸ್ಥಾವರಗಳನ್ನು ನಿರ್ಮಿಸುತ್ತಿದ್ದೇವೆ. ಆರ್ಥಿಕ ಪ್ರಗತಿ, ಷೇರು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಇವೆಲ್ಲದರಲ್ಲೂ ಭಾರತ ಇಂದು ಪ್ರಗತಿಯ ಹಾದಿಯಲ್ಲಿ ವೇಗದಿಂದ ಮುನ್ನುಗ್ಗುತ್ತಿರುವ ದೇಶ. ಪರಿಸರ ಮಾಲಿನ್ಯ, ಇಳಿಯುತ್ತಿರುವ ಇಳುವರಿ, ಫಲವತ್ತತೆ, ಪಟ್ಟಣ-ಹಳ್ಳಿಗಳ ನಡುವಿರುವ ವ್ಯತ್ಯಾಸ, ಸಮಾನತೆ, ರೈತರ ಆತ್ಮಹತ್ಯೆ ಪ್ರಕರಣಗಳು.. ಈ ಅಂಕಿಅಂಶಗಳು ಸಧ್ಯಕ್ಕೆ ನಮ್ಮ ಪ್ರಗತಿಯ ಮಾಪನಗಳಲ್ಲ. ಸಮಾಜವೇ ಹೀಗಿರುವಾಗ ರೈತರು ಮಾತ್ರ ಸುಸ್ಥಿರತೆಯತ್ತ ನೋಡಬೇಕು ಎಂದು ಬಯಸುವುದೇ ಅವಾಸ್ತವಿಕ ಎನ್ನಿಸುವುದು ನಿಜವೇ. ಆದರೆ, ಪ್ರಗತಿಯ ಬಗ್ಗೆ ಸಮಾಜದ ಸಂಕುಚಿತ ಕಲ್ಪನೆಯಿಂದಾಗುವ ಎಲ್ಲಾ ಬವಣೆಗಳು ಮೊದಲು ಮೂಡಿಬರುವುದು ರೈತರಲ್ಲಿ, ನೈಸರ್ಗಿಕ ಸಂಪನ್ಮೂಲಗಳನ್ನೇ ನೆಚ್ಚಿಕೊಂಡಿರುವ ಇತರ ಸಾಮಾಜಿಕ ವರ್ಗಗಳಲ್ಲಿ. ಇವರ ಜೀವನೋಪಾಯದ ಸಂರಕ್ಷಣೆ ನಮ್ಮ ಸಮಾಜದ ಬುನಾದಿಯನ್ನು ಸ್ಥಿರವಾಗಿಡಲು ಅತ್ಯವಶ್ಯಕ.






Recent comments
11 weeks 2 days ago
11 weeks 3 days ago
1 year 4 weeks ago
1 year 4 weeks ago
1 year 8 weeks ago
1 year 8 weeks ago