ಸಾವಯವ ಕೃಷಿ ಮತ್ತು ಸಮಾಜ
ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಗೆ ಸಿಗುತ್ತಿರುವ ಮಾನ್ಯತೆ ಮತ್ತು ಈ ಬಗೆಯ ಕೃಷಿಯಲ್ಲಿ ಹಲವು ರೈತರು ಕಾಣುತ್ತಿರುವ ಯಶೋಗಾಥೆಗಳು ಕನ್ನಡ ದೈನಂದಿಕಗಳಲ್ಲಿ ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ರಾಸಯನಿಕರಹಿತ ಕೃಷಿ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ಪರಿಸರಸ್ನೇಹಿಯೂ ಕೂಡ ಎಂಬುದರಲ್ಲಿ ಹೆಚ್ಚಿನ ಸಂದೇಹಗಳೇನು ಉಳಿದಿಲ್ಲ. ಆದರೆ ನಮ್ಮ ಜನಸಂಖ್ಯೆಯು ಬೆಳೆಯುತ್ತಿರುವ ವೇಗದಲ್ಲಿಯೇ ಈ ವಿಧಾನಗಳಿಂದ ಇಳುವರಿಯೂ ಹೆಚ್ಚಬಲ್ಲದೇ? ಈ ವಿಧಾನಗಳ ಅಭ್ಯಾಸ ಮತ್ತು ಇವುಗಳಿಗೆ ಬೇಕಾಗಿರುವ ಅಧಿಕ ಉಸ್ತುವಾರಿಯ ಕಲೆಗಳನ್ನು ನಮ್ಮ ರೈತರು ವ್ಯಾಪಕವಾಗಿ ಅಳವಡಿಸಿಕೊಳ್ಳಬಲ್ಲರೇ ಮತ್ತು ಅತೀ ಮುಖ್ಯವಾಗಿ, ರೈತರ ಇಂದಿನ ದುಃಸ್ಥಿತಿಗೆ ಈ ಪದ್ಧತಿಯಿಂದ ಏನಾದರೂ ಒಳಿತಾಗಬಲ್ಲದೇ ಎಂಬ ಪ್ರಶ್ನೆಗಳಿಗೆ ತಕ್ಷಣದ ಉತ್ತರಗಳು ಬೇಕಿವೆ.
ಸಹಜ ಕೃಷಿಯನ್ನು ಅಳವಡಿಸಿಕೊಂಡಿರುವ, ಅಳವಡಿಸಿಕೊಳ್ಳಲು ಮುಂದಾಗುತ್ತಿರುವ ರೈತರನ್ನು ನೋಡಿ. ಇವರು ಬಹುಮಟ್ಟಿಗೆ ವಿದ್ಯಾವಂತರೂ, ತಕ್ಕ ಮಟ್ಟಿಗೆ ಅನುಕೂಲಸ್ಥರೂ, ಹೆಚ್ಚೂ ಕಡಿಮೆ ಮೇಲ್ಜಾತಿಯರೂ, ಮತ್ತು ಮುಖ್ಯವಾಗಿ, ಜೀವನದ ಆಸರೆಗೆ ಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತರಲ್ಲದವರೂ ಆಗಿರುತ್ತಾರೆ. ಕೃಷಿ ಇವರಿಗೆ ಮನಃಶಾಂತಿಯನ್ನು, ನೆಮ್ಮದಿಯನ್ನೂ ತರುವಂತಹ ವೃತ್ತಿ. ರಾಜಕೀಯವಾಗಿ ಈ ವರ್ಗ ಅಷ್ಟೇನು ಪ್ರಬಲವಲ್ಲದಿರಬಹುದು, ಆದರೆ ತಮಗೆ ಬರಬಹುದಾದ ತೊಂದರೆಗಳನ್ನು ಗ್ರಹಿಸುವುದರಲ್ಲಿ ಮತ್ತು ಬರುವ ತೊಂದರೆಗಳನ್ನು ಎದುರಿಸಿ ನಿವಾರಿಸಿಕೊಳ್ಳುವಲ್ಲಿ ಇವರಿಗೆ ಇತರ ರೈತರಿಗಿಂತ ಹೆಚ್ಚಿನ ಶಕ್ತಿಯಿದೆ ಎಂಬುದನ್ನು ನಂಬಬಹುದು. ಅಂದ ಮಾತ್ರಕ್ಕೆ ಇವರು ಮಾಡುತ್ತಿರುವುದು ಸಣ್ಣ ಸಾಧನೆ ಎನ್ನುವುದು ತಪ್ಪು. Innovation ಆಗಲೀ ಅಥವ ಯಾವುದೇ ಹೊಸ ತರಹದ ಬೆಳವಣಿಗೆಗೆ ಅವಕಾಶ ಈ ತರಹದ ಅನುಕೂಲಕರ ಸಂದರ್ಭಗಳಲ್ಲಿ ಮಾತ್ರ ಸಾಧ್ಯ ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ. ಸಹಜ ಕೃಷಿ ಮತ್ತು ಅದರ ಸಫಲತೆಗೆ ಈ ತರಹದ ಸಂದರ್ಭಗಳೇ ಕಾರಣವಾಗಿರಬಹುದು.
ಇಂದು, ಈ ವರ್ಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರು ಕಂಡಿಕೊಂಡ ಪರಿಹಾರಗಳು ನಾನು ಮೇಲೆ ಹೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರವಾಗಬಲ್ಲವು. ತಮ್ಮ ಕೃಷಿ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಸಹಜ ಕೃಷಿಯನ್ನು ಅಭ್ಯಯಿಸುತ್ತಿರವ ರೈತರ ಮುಂದಿರುವ ಪ್ರಮುಖ ಸಮಸ್ಯೆ. ಬಹುಮಟ್ಟಿಗೆ ಈ ರೈತರು ಸಮಾನಮನಸ್ಕರ ರೈತರ ಜೊತೆಗೂಡಿ ತಮ್ಮ ಉತ್ಪನ್ನಗಳನ್ನು ಮಾರಲು ತಮ್ಮದೇ ಆದ ಪರ್ಯಾಯ ಮಾರುಕಟ್ಟೆಯನ್ನು ಹುಡುಕಿಕೊಳ್ಳುತ್ತಾರೆ. ಈ ಮಾರುಕಟ್ಟೆಗಳ ಖರ್ಚು ವೆಚ್ಚಗಳನ್ನು ಈ ರೈತರ ಗುಂಪೇ ನಿಭಾಯಿಸುತ್ತದೆ. ಮಾರುಕಟ್ಟೆಯ ಬೇಡಿಕೆ, ತಮ್ಮ ಕೈಲಾಗುವ ಪೂರೈಕೆ, ಬೆಲೆಗಳ ಏರಿಳಿತ, ಖರ್ಚು ವೆಚ್ಚಗಳ ಬಗ್ಗೆ ಈ ಗುಂಪುಗಳಿಗೆ (ಬೇರೆ ರೈತರಿಗೆ ಹೋಲಿಸಿದರೆ) ಸಾಕಷ್ಟು ಹಿಡಿತವಿದ್ದಂತೆ ತೋರುತ್ತದೆ. ಹಾಗೆಯೇ ಇವರಿಗೆ ಕೃಷಿ ಸಂಬಂಧಿತ ವಿಶ್ವಾಸನೀಯ ಮಾಹಿತಿ, ಕೃಷಿ ಇಲಾಖೆಯು ಕೊಡುವ ಸವಲತ್ತುಗಳು, ಹೊಸ ತಂತ್ರಜ್ಞಾನ ಮತ್ತಿತರ ವಿಚಾರಗಳು ಲಭ್ಯವಿದೆ. ಈ ಎಲ್ಲ ಅನುಕೂಲಗಳು ಈ ವರ್ಗದ ರೈತರನ್ನು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಮತ್ತು ಅದರೊಡನೆ ಪ್ರಯೋಗ ನಡೆಸಲು ಪ್ರೇರಕವಾಗಿದೆ ಎಂದರೆ ತಪ್ಪಾಗಲಾರದು.
ಗ್ರಾಹಕರು ಈ ಪರ್ಯಾಯ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಕೊಂಡರೆ ಗ್ರಾಹಕರಿಗೆ ಮತ್ತು ಸಾವಯವ ಕೃಷಿಕರಿಗೆ ಲಾಭವೇ. ಗ್ರಾಹಕರಿಗೆ ಆರೋಗ್ಯಕರ ಆಹಾರ, ಪರಿಸರಸ್ನೇಹಿ ರೈತನಿಗೆ ಲಾಭ, ಲಾಭದಿಂದ ಮತ್ತಷ್ಟೂ ಪ್ರೋತ್ಸಾಹ. ಇದೇ ಲಾಭ ಇತರ ಸಾಮಾನ್ಯ ರೈತರನ್ನು ಸಾವಯವ ಕೃಷಿಯತ್ತ ಪ್ರೇರಪಿಸಲೂಬಹುದು. ಆದರೆ, ಮೇಲೆ ಹೇಳಿದ, ಸಾಮಾನ್ಯ ರೈತರಿಗಿಲ್ಲದ ಹಲವು ಸವಲತ್ತುಗಳನ್ನು ಸಾವಯವ ಕೃಷಿಕರು ಸೂಕ್ತವಾಗಿ ಬಳಸಿಕೊಳ್ಳುತ್ತಿರುವುದು ಸಾಮಾನ್ಯ ರೈತರ ಪಾಲಿಗೆ ಮತ್ತೊಂದು ಸಮಸ್ಯೆಯೂ ಆಗಬಹುದು. ಈ ಎರಡು ವರ್ಗದ ರೈತರಲ್ಲಿ ಸ್ಪರ್ಧೆ ಏರ್ಪಟ್ಟರೆ ಆಪತ್ತಿರುವುದು ಸಾಮಾನ್ಯ ರೈತರಿಗೇ. ಅತ್ತ, ಬರುವ ಲಾಭವೇ ಕಡಿಮೆಯಾದರೆ, ಇತ್ತ ನಷ್ಟಾವಾದರೂ ಕೃಷಿ ಬಿಡುವಂತಿಲ್ಲ.
ಈ ಜಗ್ಗಾಟವು ಇಂದಿನ ಭಾರತೀಯ ಕೃಷಿಯ ವಾಸ್ತವವನ್ನು ತೋರುತ್ತದೆ. ನಮ್ಮ ರೈತವರ್ಗ ಒಂದು ವೈವಿಧ್ಯಮಯ ಗುಂಪು. ಉದಾರೀಕರಣದ ಕೃಷಿ ಮತ್ತು ಆರ್ಥಿಕ ನೀತಿ ನಿಯಮಗಳಿಂದ ಒಂದು ವರ್ಗದ ರೈತರಿಗೆ ಅನುಕೂಲಕರವಾದರೆ ಮತ್ತೊಬ್ಬರಿಗೆ ಅದರಿಂದ ತೊಂದರೆಯೇ ಹೆಚ್ಚು. ಆದ್ದರಿಂದ ಇತ್ತೀಚಿನ ದಿನಗಳಲ್ಲಿ, ರೈತನಿಗೆ ರೈತನೇ ಪ್ರತಿಸ್ಪರ್ಧಿ. ಕೃಷಿ ಕಾರ್ಮಿಕನಿಗೆ ರೈತನಿಂದಲೇ ಅಪಾಯ, ರೈತನಿಗೆ ಯಂತ್ರವೇ ಮಿತ್ರ.
ಈ ಪರಿಸ್ಥಿತಿಯಲ್ಲಿ ಸಾವಯವ ಕೃಷಿಯು ಸ್ಪರ್ಧಾ ಮನೋಭಾವದ ಜೊತೆಗೇ ಸಹಕಾರೀ ಮನೋಭಾವವನ್ನೂ ಉತ್ತೇಜಿಸಬೇಕಾಗಿದೆ. ಸಾವಯವ ಕೃಷಿಯನ್ನು ಕೇವಲ ಪರಿಸರ ಮತ್ತು ವೈಯುಕ್ತಿಕ ಆರೋಗ್ಯದ ದೃಷ್ಟಿಯಲ್ಲಿ ನೋಡದೆ, ಈ ವಿಧಾನಗಳನ್ನು ಆಧುನಿಕ ಆರ್ಥಿಕ ಶಕ್ತಿಗಳ ವಿರುದ್ಧವಾಗಿ, ನಮ್ಮ ಗ್ರಾಮೀಣ ಕೃಷಿ ಸಂಸ್ಕೃತಿಯ ಧ್ಯೋತಕವಾಗಿ, ಸಮಾಜದ ಸಮಗ್ರ ಒಳಿತಿನ ವಿಶಾಲ ದೃಷ್ಟಿಯಲ್ಲಿ ನೋಡಬೇಕಿದೆ. ಸಾವಯವ ಕೃಷಿಯ ಒಳಿತನ್ನು ಎಲ್ಲಾ ರೈತಾಪಿ ಜನರು, ಕೃಷಿ ಕಾರ್ಮಿಕರು, ಕೃಷಿ ಸಂಬಂಧಿತ ಉದ್ಯಮಗಳು ತಿಳಿಯಬೇಕು. ಆದರಿದು ಸರ್ಕಾರದಿಂದಾಗುವ ಕೆಲಸವಲ್ಲ. ಮುಖ್ಯವಾಗಿ ರೈತಸಂಘ, ಪ್ರಗತಿಪರ ರೈತರು ಮತ್ತು ಸಾಮಾನ್ಯರೈತರೊಡನೆ ಸಂವಾದಗಳು ಹೆಚ್ಚಾಗಬೇಕು, ಸಮನ್ವಯ ಸಾಧ್ಯವಾಗಬೇಕು. ಈಗಾಗಲೇ ಎರಡು ತಲೆಮಾರಿನಿಂದ ರಾಸಯನಿಕ, ರಸಗೊಬ್ಬರಗಳಾಧಾರಿತ ಕೃಷಿಗೆ ಹೊಂದುಕೊಂಡಿರುವ ಸಾಮಾನ್ಯ ರೈತನು ಸಾವಯವದಂತಹ ಹೊಸತು-ಹಳತಿನ ಮಿಶ್ರ ಪದ್ಧತಿಯನ್ನು ಅನುಸರಿಸಲು ಆಸಕ್ತನೇ ಎಂಬುದೇ ಈ ನಿಟ್ಟಿನಲ್ಲಿ ನಮ್ಮ ಮುಂದಿರುವ ಮೊದಲ ಪ್ರಶ್ನೆ.






ಕಶ್ಯಪ್ ರವರೆ..
ನಿಮ್ಮ ಈ ಲೇಖನ ತುಂಬಾ ಆಳವಾದ ಚಿಂತನೆಯ ನಂತರ ಬಂದಿದೆ ಎಂದು ಭಾವಿಸುತ್ತೇನೆ. ಆದರೆ ನನ್ನ ಕೆಲವು ವಿಷಯಗಳನ್ನು ಇಲ್ಲಿ ಸೇರಿಸಲು ಇಚ್ಚಿಸುತ್ತೇನೆ.
ಸಂಪೂರ್ಣ ಸಾವಯವ ಕೃಷಿ, ನಮ್ಮ ಬಡ ರೈತನ ಕೃಷಿಯಾಗಲು ಸಾದ್ಯವಿಲ್ಲ. ಹಾಗೂ ಎಲ್ಲರನ್ನೂ ಸಾವಯವ ಕೃಷಿಗೆ ಎಳೆದು ತರುವುದೂ ಸಾದ್ಯವಿಲ್ಲ.
ಇದಕ್ಕೆ ತನ್ನದೇ ಆದ ಸಮಸ್ಯೆಗಳಿವೆ.
ಸಂಪೂರ್ಣ ಸಾವಯವ ಕೃಷಿಯ ಲಾಭ ರೈತನಿಗಾಗಬೇಕಾದರೆ.. ಅದು ತನ್ನ ಉತ್ಪಾದನೆಗೆ ಸಿಗುವ ಬೆಲೆಯಾಗಲೀ ಅಥವಾ ತನ್ನ ನೆಲ/ಪರಿಸರಕ್ಕಾಗುವ ಲಾಭವಾಗಲೀ..ಕನಿಷ್ಟ ೩-೪ ವರ್ಷ್ಗಳೇ ಬೇಕು.
ನಮ್ಮಲ್ಲಿ ಎಷ್ಟು ಜನ ರೈತರು ಈ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ?? ಶೇ.೫ ಕ್ಕಿಂತ ಹೆಚ್ಚಿಗೆ ಇರಲಾರರು.
ಈಗ ಮಾರುಕಟ್ಟೆಯಲ್ಲಿ ಸಿಗುವ ಸಾವಯವ ಕೃಷಿ ಉತ್ಪನ್ನಗಳಲ್ಲಿ ಶೇ.೫೦ ಸಾವಯವ ಕೃಷಿಯಿಂದ ಬಂದಂತಹವಲ್ಲ. ಹಣದಾಸೆಗಾಗಿ ವ್ಯಾಪಾರೀ ಕಂಪನಿಗಳು/ಪ್ರಮಾಣೀಕರಿಸುವ ಕಂಪನಿಗಳು ಇವಕ್ಕೆ ಸಾವಯವ ಲೇಪ ಹಚ್ಚಿರುತ್ತಾರೆ.
ಇದರಿಂದಾಗಿ.. ವಿಶ್ವ ಸಾವಯವ ಮಾರುಕಟ್ಟೆಯಲ್ಲಿ ಭಾರತದ ಸಾವಯವ ಕೃಷಿ ಉತ್ಪನ್ನಗಳನ್ನು ಅನುಮಾನದಿಂದ ನೋಡುವ ಪರಿಸ್ತಿತಿ ಇದೆ.
ರೈತರಿಗೆ ನನ್ನ ಸಲಹೆಯೆಂದರೆ...ಸಂಪೂರ್ಣ ಸಾವಯವ ಕೃಷಿಯಕಡೆ ಗಮನವಿರಬೇಕಷ್ಟೆ..ಆದರೆ ತಮ್ಮ ನೆಲ/ಬೆಳೆ/ವಾತಾವರಣ/ಆರ್ಥಿಕ ಪರಿಸ್ಥಿತಿ ಎಲ್ಲವನ್ನೂ ಪರಿಗಣಿಸಿ..ರಾಸಾಯನಿಕಗಳ ಉಪಯೋಗ ಎಷ್ಟು ಬೇಕೋ ಅಷ್ಟು ಮಾತ್ರ ಉಪಯೋಗಿಸಿ ತಮ್ಮ ಉತ್ಪಾದಕತ್ವವನ್ನು ಹೆಚ್ಚಿಸಿಕೊಳ್ಳಬೇಕು.
-ಚಿ.ರಂ.ಶಿ.
------------------------------------------
ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???
ಪ್ರಿಯ ಚಿ.ರಂ.ಶಿ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಸಾವಯವ ಕೃಷಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವುದು ಯಾವುದೇ ರೈತನಿಗೆ ತಕ್ಷಣಕ್ಕೆ ಸಾಧ್ಯವಿಲ್ಲ ಎಂಬುದು ಸತ್ಯ. ತಾವು ಮುಖ್ಯವಾದ ಪ್ರಶ್ನೆಯನ್ನೇ ಎತ್ತಿದ್ದೀರಿ. ಯಾರನ್ನೂ ಸಾವಯವಕ್ಕೆ ’ಎಳೆದು’ ತರಲು ಸಾಧ್ಯವಿಲ್ಲ. ನನ್ನ ಲೇಖನದಲ್ಲಿ ರೈತರೆಲ್ಲರೂ ಸಾವಯವ ಕೃಷಿಯನ್ನೇ ತಕ್ಷಣಕ್ಕೆ ಅಳವಡಿಸಿಕೊಳ್ಳಬೇಕು ಎಂದು ಹೇಳಿಲ್ಲ. ಈ ಲೇಖನದ ಉದ್ದೇಶವೂ ಅದಲ್ಲ.
ಇಲ್ಲಿ ನಾನು ನೋಡುತ್ತಿರುವ ವಿಷಯಗಳು ೧. ಕರ್ನಾಟಕದಲ್ಲಿ ಸಾವಯವ ಕೃಷಿಯ ಇಂದಿನ ಸ್ಥಿತಿಗತಿ, ೨. ಅದನ್ನು ಅಳವಡಿಸಿಕೊಂಡಿರುವ ರೈತರ ಗುಂಪು, ಅವರ ಲಕ್ಷಣಗಳು, ೩. ಈ ಗುಂಪಿಗೂ ಇತರ ರೈತರ ಗುಂಪಿಗೂ ಇರುವ ವ್ಯತ್ಯಾಸಗಳೇನು, ಇವರ ನಡುವೆಯಿರುವ ಪೈಪೋಟಿ ಎಂತಹುದು ೪. ಸಾವಯವ ಕೃಷಿಕರನ್ನು ನೋಡಿ ಇತರ ಗುಂಪುಗಳು ಕಲಿಯಬೇಕಾದದ್ದೇನು ಎಂಬುದು.
ಇಂತಿ,
ಶ್ಯಾಮ್
--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ