ಕೃಷಿಯಲ್ಲಿ ಸುಸ್ಥಿರತೆ

ಬಳಲಿರುವ ರೈತನಿಗಿಂದು ಸಹಾಯಹಸ್ತ ನೀಡಲು ಹಲವಾರು ಜನ ತಯಾರಿದ್ದಾರೆ. ಕೃಷಿಗಾಗಿಯೇ ವಿಶ್ವವಿದ್ಯಾಲಯಗಳು, ಮಾಹಿತಿ ಕೇಂದ್ರಗಳು, ಸರ್ಕಾರದ ವಿವಿಧ ಯೋಜನೆಗಳು, ಸಾಲಗಳು, ವಿನಾಯತಿಗಳು, ವಿಮೆಗಳು, ಹಲವು ಹೊಸ-ಹಳೆ ಬೇಸಾಯ ಪದ್ಧತಿಗಳು, ಹೊಸ ರಾಸಾಯನಿಕಗಳು, ಗೊಬ್ಬರಗಳು, ಹೊಸ ಬಗೆಯ ಬೆಳೆಗಳು, ಬೀಜಗಳು, ಹೊಸ ನೀರಾವರಿ ತಂತ್ರಜ್ಞಾನಗಳು, ಹೊಸ ರೀತಿಯ ಖಾಸಗಿ ಒಡಂಬಡಿಕೆಗಳು. ಹೀಗೆ ಒಂದೇ ಎರಡೇ..ಲೆಕ್ಕವಿಲ್ಲದಷ್ಟು ಕೈಗಳು, ಸಹಾಯ ಮಾಡುವುದಕ್ಕೆ. ಇವನ್ನೆಲ್ಲ ನೋಡಿದರೆ ನಮ್ಮ ರೈತಾಪಿ ಜನಕ್ಕಿರುವಷ್ಟು ಬೆಂಬಲ ಸಮಾಜದ ಯಾವುದೇ ವರ್ಗದ ಜನರಿಗೂ ಇಲ್ಲವೆಂದು ಕೆಲವೊಮ್ಮೆ ಹೊಟ್ಟೆಕಿಚ್ಚೇ ಆಗಬಹುದು ದೂರದಿಂದ ನೋಡಿದವರಿಗೆ.

ಆದರೆ ವಾಸ್ತವ ಎಷ್ಟು 'ಅವಾಸ್ತವ'! ಇಷ್ಟೆಲ್ಲ ಇದ್ದೂ ಇಂದು ರೈತ ತೊಂದರೆ, ಹತಾಶೆಗೊಳಗಾಗಿದ್ದಾನೆಂದರೆ ನಂಬಲು ಸಾಧ್ಯವೇ ? ಅಥವ, ಅವನ ಕಷ್ಟಕಾರ್ಪಣ್ಯಗಳೆಷ್ಟಿವೆಯೆಂದರೆ ಇಷ್ಟೆಲ್ಲ ಇದ್ದೂ ಅವನ ತೊಂದರೆಗಳು ದೂರವಾಗದೆಯೆ ಇರಬಹುದೆ ? ಅಥವ ಮೇಲೆನ ಬಹಳಷ್ಟು ಉದಾಹರಣೆಗಳು ಬೊಗಳೆಯೇ, ದುರುದ್ದೇಶದಿಂದ ಕೂಡಿದ ಷಡ್ಯಂತ್ರಗಳೇ?

ಹೇಳಿದಂತೆ ನಡೆಯದ ಯೋಜನೆಗಳು, ಕೆಲಸ ಮಾಡದ ತಂತ್ರಾಂಶಗಳು, ಹುಟ್ಟದ ಫಲಕೊಡದ ಬೀಜಗಳು.. ಇವು ರೈತರ ಆಯುಧಗಳು. ತಪ್ಪೊಪ್ಪಿಕೊಳ್ಳುವುದಕ್ಕೆ ಹಿಂಜರಿಯುವ ವಿಜ್ಞ್ನಾನಿಗಳು, ಆಲಸೀ ಸರ್ಕಾರಿ ನೌಕರರು,ಸ್ವಂತ ಅನುಕೂಲಕ್ಕೆ ತಕ್ಕಂತೆ ನಡೆಯುವ ರಾಜಕಾರಣಿಗಳು, ಸ್ವಂತ ಲಾಭವೊಂದನ್ನೆ ಎಣಿಸುವ ವ್ಯಾಪಾರಿಗಳು.. ಇವರುಗಳು ರೈತರಿಗೆ ಆಪಾಂದ್ಭಾಂಧವರು… ರೈತರ ಕಷ್ಟಗಳಲ್ಲಿ ಯಾರ ಪಾಲು ಎಷ್ಟೆಷ್ಟು?

ಇವನ್ನೆಲ್ಲ ರಿಪೇರಿ ಮಾಡುವುದು ಸಧ್ಯಕ್ಕೆ ಆಗದ ಮಾತು. ಇಂದಿನ ಪರಿಸ್ಥಿತಿಯಲ್ಲಿ ನನಗನ್ನಿಸುವ ಹಾಗೆ, ತನ್ನ ದು:ಸ್ಥಿತಿಯನ್ನು ಸ್ವತ: ರೈತ ಮಾತ್ರ ನಿವಾರಿಸಿಕೊಳ್ಳಬಲ್ಲ. ಹಾಗೆಂದ ಮಾತ್ರಕ್ಕೆ ಅವನ ತೊಂದರೆಗಳಿಗೆ ಅವನೇ ಕಾರಣವೆಂದು ಖಂಡಿತ ಅಲ್ಲ. ಯಾರು ಸೃಷ್ಟಿಸಿದ ತೊಂದರೆಗಳೋ, ಒಟ್ಟಿನಲ್ಲಿ ಸ್ವಲಮಟ್ಟಿಗೆ ಪರಿಹಾರವಿರುವುದು ರೈತನ ಕೈಯಲ್ಲಿಯೇ. ಈ ಪರಿಹಾರದ ಒಂದು ಮುಖ್ಯ ಭಾಗ, ರೈತನ ಯೋಚನೆಗಳಲ್ಲಿ ಬದಲಾವಣೆ, ಸುಸ್ಥಿರತೆಯತ್ತ ಗಮನ.

ಕೃಷಿಯೆಂಬುದು ಒಂದು ಪ್ರತ್ಯೇಕ ಜೀವನವಿಧಾನವೆ. ಇದರಲ್ಲಿ ತಿಂಗಳ ತುದಿಯಲ್ಲಿ ಇತರೆ ನೌಕರಿಗಳಂತೆ ಸಂಬಳದ ರೂಪದಲ್ಲಿ ದುಡ್ಡು ಬರುವುದಿಲ್ಲ. ಹಾಗಾಗಿ ಅವರಂತೆ ಖರ್ಚು ಮಾಡುವುದೋ, ಬೇಕಾದಂತೆ ರಜ ಹಾಕಿ ಊರು ಸುತ್ತವುದೋ ಮಾಡಲು ಬರುವುದಿಲ್ಲ. ಹಾಗೆಯೇ ಅವರಿಗೆ ಕೊಡುವ ಹಾಗೆ ಸಾಲವೂ ಕೊಡಲು ಬರುವುದಿಲ್ಲ. ಆದರೆ "ಅವರಂತೆಯೇ ನನಗೂ ದೊಡ್ಡ ಮನೆ ಕಟ್ಟಿಸುವ ಆಸೆಯಿದೆ, ದೊಡ್ಡ ಕಾರಿನಲ್ಲಿ ಜೀನ್ಸ್ ಹಾಕಿ ಓಡಾಡುವ ಬಯಕೆಯಿದೆ" ಎನ್ನುವ ರೈತ ಅನಿವಾರ್ಯವಾಗಿ ತನ್ನ ಜೀವನದ ಲಗಾಮನ್ನು ಇತರರ ಕೈಯಿಗೆ ಕೊಡಬೇಕಾಗುತ್ತದೆ. ಬೇಡದ ಬೆಳೆಗೆ ಬೇಡದ ಸಾಲ ತೆಗೆಯಬೇಕಾಗುತ್ತದೆ, ಹಿಂದು ಮುಂದರಿಯದ ಬೇಸಾಯ ಪದ್ಧತಿಗಳನ್ನು ಯಾವುದೋ ಆಸೆಯಿಂದ ಅಳವಡಿಸಿಕೊಳ್ಳಬೇಕಾಗುತ್ತದೆ, ಕಂಡ ಕನಸನ್ನು ಸಾಕಾರಗೊಳಿಸಲು, ಇಲ್ಲದ ದುಡ್ಡನ್ನು ಸೃಷ್ಟಿಸಲು ಜೂಜಾಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಭವಿಷ್ಯದಲ್ಲಿ ತೊಂದರೆಯಾದರೆ, ಕಂಡವರ ಕಾಲು ಹಿಡಿಯಬೇಕಾಗುತ್ತದೆ.

ನನ್ನ ಮಾತುಗಳು ನಿಮಗೆ ಬೇಜಾರಾಗಬಹುದು, ಆದರೆ ಕೃಷಿ ಸುಲಭವಾಗಿ ಕೈಗೂಡುವ ವೃತ್ತಿಯಲ್ಲ. ಈ ವೃತ್ತಿಗೆ ಅದರದ್ದೇ ಆದ ಹಲವು ತ್ಯಾಗಗಳ ಅವಶ್ಯಕತೆಯಿದೆ. ಅಂದ ಮಾತ್ರಕ್ಕೆ ಕೃಷಿಯೆಂದರೆ ಬಡತನದಲ್ಲೇ ಬದುಕುವುದು ಎಂದಲ್ಲ. ಈ ಜೀವನಶೈಲಿಯನ್ನು ಆರಿಸಿಕೊಂಡು ಅದರಲ್ಲಿ ನೆಮ್ಮದಿ ಕಾಣುವಂತಹ ಬದುಕನ್ನು ಸೃಷ್ಟಿಸಬಹುದು, ಅದರಲ್ಲಿಯೇ ತೃಪ್ತಿ ಪಡಬಹುದು. ಇದಕ್ಕಾಗಿ, ಮುಖ್ಯವಾಗಿ ಮೊದಲು ಕೃಷಿಯಲ್ಲಿ ಸುಸ್ಥಿರತೆಯನ್ನು ಕಂಡುಕೊಳ್ಳಬೇಕು.

ಕೃಷಿಯಲ್ಲಿ ಸುಸ್ಥಿರತೆಯನ್ನು ಕಂಡುಕೊಳ್ಳಲು "intensive management"ನ ಅವಶ್ಯಕತೆಯಿದೆ ಅನ್ನ್ಸತ್ತೆ. ಬೆಳೆಯುವ ಬೆಳೆಗಳ ಬಗ್ಗೆ, ತೊಡಗುವ ಚಟುವಟಿಕೆಗಳ ಬಗ್ಗೆ ಜಾಗರೂಕತೆಯಿಂದ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ. ಇರುವ ಜಾಗಕ್ಕೆ ಹೊಂದಿಕೊಳ್ಳುವ ಬೆಳೆಗಳಾವುವು, ಯಾವ ವಿಧದ ಬೇಸಾಯ ನೈಸರ್ಗಿಕವಾಗಿಯೂ, ಆರ್ಥಿಕವಾಗಿಯೂ ಮುಂದಿನ ವರ್ಷಗಳಿಗೂ ಲಾಭದಾಯಕ, ಯಾವ ಬಗೆಯ ಬೆಳೆಗಳನ್ನು ಬೆಳೆದು ತನಗೆ ಅನುಭವವಿದೆ, ಯಾವ ಬೆಳೆಯನ್ನು ಬೆಳೆದರೆ ಮನೆಯ, ಕೊಟ್ಟಿಗೆಯ ಬಳಕೆಗೆ ಎಷ್ಟು ಉಪಯೋಗವಾಗಬಲ್ಲದು, ಬೆಳೆಯಿಂದ ಮನೆಗೆ ಬೇಕಾದ ಪೌಷ್ಠಿಕಾಂಶ ಎಷ್ಟು ಪೂರೈಕೆಯಾಗಬಹುದು, ತಾನು ಬೆಳೆಯುವ ಉತ್ಪನ್ನವನ್ನು ಯಾರು ಹೇಗೆ ಉಪಯೋಗಿಸಬಲ್ಲರು, ಅದಕ್ಕಿರುವ ಬೇಡಿಕೆ ಸಹಜವಾದದ್ದೇ ಅಥವ ಎಲ್ಲೋ ಎಡವಟ್ಟಾಗುವ ಲಕ್ಷಣವಿದೆಯೆ, ಹೆಚ್ಚುವರಿ ಉತ್ಪನ್ನವನ್ನು ಖಂಡಿತವಾಗಿ, ಸರಾಗವಾಗಿ ಮಾರಾಟ ಮಾಡುವ ಬಗೆಯಾವುದು, ಇದರಿಂದ ಉಳಿದ ಖರ್ಚುಗಳನ್ನು ನಿಭಾಯಿಸಲು ಸಾಧ್ಯವೇ, ನಷ್ಟವಾದರೆ ಪರ್ಯಾಯ ಮಾರ್ಗಗಳೇನು,ಬಿಡುವಿನ ವೇಳೆಯಲ್ಲಿ ತಾನು ಏನೇನು ಮಾಡಬಹುದು, ಯಾವ ಖರ್ಚುಗಳನ್ನು ಮಾಡಲೇ ಬೇಕು, ಯಾವುದನ್ನು ಮುಂದೆ ತಳ್ಳಬಹುದು ಹೀಗೆ ಹಲವು ನಿರ್ಣಯಗಳನ್ನು ಒಟ್ಟಿಗೇ ನಿಭಾಯಿಸಬೇಕಾಗುತ್ತದೆ. ಇದು ಕಷ್ಟಕರ ಕೆಲಸ. ಮೊದಲೇ ನೂರೆಂಟು ನಿರ್ಧಾರಗಳು. ಅದರಲ್ಲಿಯೂ ಮುಕ್ಕಾಲು ಪಾಲು ಪ್ರಶ್ನೆಗಳಿಗೆ ಉತ್ತರಗಳೇ ಅನಿಶ್ಚಿತ.ಇಂತಹ ಕಷ್ಟಕರ ಕೆಲಸವನ್ನು ಸುಲಭಗೊಳಿಸುವುದರಲ್ಲಿ ಕೆಲವು ವಿಷಯಗಳು ಸಹಾಯಕಾರಿಯಾಗಬಲ್ಲವು.

ಕೃಷಿಕ ಜೀವನವನ್ನು ನೋಡುವ/ನೋಡಬೇಕಾದ ವಿಧಾನವೇ ಬೇರೆ. ತಿಂಗಳ ಕೊನೆಯಲ್ಲಿ ಸಂಬಳ ಬರದಿದ್ದರೂ, ತಿಂಗಳ ತುಂಬ ಬಳಸಲು, ಜೀವಿಸಲು ಕೃಷಿಕನಿಗೆ ಹಲವು ವಸ್ತುಗಳು ಲಭ್ಯವಿವೆ. ಮನೆಯ ಹಸುವಿನದ್ದೇ ಹಾಲು, ಅದೇ ಹಸುವಿನ ಸಗಣಿಯಿಂದ ಮನೆ ಸಾರಿಸುವುದು, ಇಂಧನಕ್ಕೆ ಗೋಬರ್ ಗ್ಯಾಸ್, ಬೆಳೆಗೆ ಗೊಬ್ಬರ,ಪಕ್ಕದ ಗುಡ್ಡದಿಂದ ಹಸುವಿಗೆ ಸೊಪ್ಪು ಮತ್ತು ನೀರು ಕಾಯಲಿಕ್ಕೆ ಸೌದೆ,ಮನೆಯೆದುರಿನ ಮರದ ಹಣ್ಣು ಹಂಪಲುಗಳು, ಹಿತ್ತಲಿನ ಗಿಡಗಳ ತರಕಾರಿ, ಆಚೆ ತುದಿಯ ತೆಂಗಿನ ಮರದಿಂದ ಕಾಯಿ ಹೀಗೆ. ನಾನು ಹೇಳಿದಷ್ಟು ಸುಲಭವಾಗಿ ಇವೆಲ್ಲವು ಬರದಿದ್ದರೂ, ಬರುತ್ತಿರುವುದು ಸಾಕಾಗದಿದ್ದರೂ, ಕಷ್ಟಪಟ್ಟು, ಬೆವರು ಹರಿಸಿ, ತಮ್ಮ ಜ್ಞಾನ, ಅನುಭವಗಳನ್ನೆಲ್ಲ್ಲ ಉಪಯೋಗಿಸಿ ಸರಿದೂಗಿಸಬೇಕಾಗುತ್ತದೆ.

ಒಟ್ಟಿನಲ್ಲಿ, ತನಗೆ ಅನುಭವವಿಲ್ಲದ ಅಥವ ತನ್ನ ನಿಯಂತ್ರಣವಿಲ್ಲದ ಕೆಲಸಗಳಿಗೆ ಕೈಹಾಕುವುದನ್ನು ಆದಷ್ಟು ಕಡಿಮೆ ಮಾಡಬೇಕು. ಕೊಂಡು ತರುವ ಸಾಮಗ್ರಿಗಳ (ಗೊಬ್ಬರ, ಕೀಟನಾಶಕಗಳಿಂದ ಹಿಡಿದು ಭತ್ತ, ಬೆಲ್ಲ, ಎಣ್ಣೆಗಳ ತನಕ) ಪರ್ಯಾಯವಾಗಿ ಸ್ವಂತವಾಗಿಯೇ ಉತ್ಪಾದಿಸಬಹುದ ವಸ್ತುಗಳ ಬಳಕೆಗಳನ್ನು ಹೆಚ್ಚಿಸಬೇಕು. ಆದಷ್ಟು ಮಟ್ಟಿಗೆ ತನಗೆ ತಿಳಿದಿರುವ, ಅರ್ಥವಾಗುವ ಮಾರುಕಟ್ಟೆಗಳಲ್ಲಿಯೇ ಉತ್ಪನ್ನವನ್ನು ಮಾರಬೇಕು. ಈ ತರಹದ ನಿರ್ಧಾರಗಳಲ್ಲಿ ಅನಿಶ್ಚತೆ ಕಡಿಮೆಯಾಗುತ್ತದೆ. ಲಾಭಾಂಶವು ಕಡಿಮೆಯಾದರೂ, ಕೆಲಸ ಹೆಚ್ಚಾದರೂ, ಬರಬಹುದಾದ ಲಾಭದ ಮೇಲೆ ನಿಯಂತ್ರಣವಿರುತ್ತದೆ, ಭರವಸೆಯಿರುತ್ತದೆ. ಮೇಲಾಗಿ, ಯಾರನ್ನೂ ಕಾಡುವ, ಬೇಡುವ ಪರಿಸ್ಥಿತಿ ಕಡಿಮೆಯಾಗುತ್ತದೆ.ಇದರಿಂದ ಕೃಷಿಯಲ್ಲಿ ಸುಸ್ಥಿರತೆ ಮೂಡುತ್ತದೆ.

ಕೃಷಿಕ ಅಂದರೆ ಹೀಗೇ ಇರಬೇಕು, ಇಂತಿಷ್ಟೇ ಖರ್ಚು ಮಾಡಬೇಕು ಅನ್ನುವ ಅಧಿಕಾರ ನನಗಿಲ್ಲ. ಹಾಗೆ ಮಾಡಿದರೂ ಇಂದೋ ನಾಳೆಯೋ ನೆಮ್ಮದಿ ಕಂಡುಕೊಂಡುಬಿಡಬಹುದು ಎಂಬುದೂ ಅಸತ್ಯವೆ. ಆದರೆ ಪ್ರತಿಯೊಂದು ವೃತ್ತಿಗೂ ಅದರದೇ ಆದ ಜೀವನಶೈಲಿಯನ್ನು ಇರುವುದೂ ನಿಜ. ವೃತ್ತಿಗೆ ತಕ್ಕಂತೆ, ಅವರವರ ಭಾವಕ್ಕೆ ಮೆಚ್ಚುವಂತೆ ಜೀವನದಲ್ಲಿ ಹೊಂದಾವಣಿಕೆ ಮಾಡಿಕೊಳ್ಳುಬೇಕು ಎನ್ನುವುದೇ ಇದರ ಆಶಯ. ಇಂದು ರೈತನ ಸಮಸ್ಯೆಗೆ ನಮ್ಮ ಮುಂದಿರುವ ಬಹಳಷ್ಟು ಪರಿಹಾರಗಳು ವಾಸ್ತವದಲ್ಲಿ "ಸಂಕಟ ಬಂದಾಗ ವೆಂಕಟರಮಣ" ಎನ್ನುವಂತೆ, ತಕ್ಷಣಕ್ಕೆ ಸಹಾಯಕಾರಿಯಾದರೂ ಮುಂದೆ ಯಥಾಸ್ಥಿತಿಗೆ ಕೊಂಡೊಯ್ಯುವಂತಹವು. ಕೃಷಿಯಲ್ಲಿ ಸುಸ್ಥಿರತೆ ತರುವುದು ಸುಲಭಸಾಧ್ಯವಲ್ಲದಿದ್ದರೂ ಧೀರ್ಘಾವಧಿಯಲ್ಲಿ ತೃಪ್ತಿ ನೆಮ್ಮದಿ ನೀಡಬಲ್ಲದು.

ರೈತರನ್ನು ಸರ್ಕಾರಗಳು, ನಗರಗಳ ಶ್ರೀಮಂತ ಜನರು ಕಡೆಗಾಣಿಸಿದ್ದಾರೆ, ನಿಜ. ಸರ್ಕಾರದ ಕೃಷಿ ನೀತಿಗಳಿಂದ ಹಾಗು ಇತರೆ ಉದ್ಯಮಗಳ ಪ್ರೋತ್ಸಾಹದಿಂದ ರೈತರಿಗೆ ನೇರವಾಗಿಯೂ ಹಾಗು ಪರೋಕ್ಷವಾಗಿಯೂ ಅನ್ಯಾಯವಾಗಿದೆ ನಿಜ. ಗ್ಯಾಟ್, ಟ್ರಿಪ್ಸ್ ಮುಂತಾದ ಒಪ್ಪಂದಗಳು ರೈತರನ್ನು ಬೇಡದಿದ್ದರೂ ಬಲವಂತವಾಗಿ ಅನಿಶ್ಚತೆಗೆ ತಳ್ಳುತ್ತವೆ, ಹೌದು. ಇವೆಲ್ಲವನ್ನು ಪ್ರತಿಭಟಿಸಬೇಕು. ಅದರ ಜೊತೆ ರೈತ ತನ್ನ ಏಳಿಗೆಗೆ ತಾನೆ ಬದಲಾಗುವುದರಲ್ಲಿ ತಪ್ಪೇನಿಲ್ಲವಲ್ಲ.