ಕೃಷಿಯಲ್ಲಿ ಉದಾರೀಕರಣ - ಒಂದು ಕೈಪಿಡಿ

ಇಂದಿನ ಕೃಷಿಯಲ್ಲಿನ ಸಮಸ್ಯೆಗಳು ಉಲ್ಬಣಿಸಲು ರಾಜ್ಯ, ರಾಷ್ಟ್ರದ ಕೃಷಿನೀತಿಯ ಬಗ್ಗೆ ಸಾಮಾನ್ಯ ಜನರಿಗಿರುವ ಗೊಂದಲಗಳೂ, ಅವುಗಳನ್ನು ನಾನಾರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ಜನರೂ ಒಂದು ರೀತಿಯ ಕಾರಣವೆನ್ನಬಹುದು. ಉದಾರೀಕರಣದ ಪಥದಲ್ಲಿರುವ ಸಾಗಿರುವ ದೇಶದ ಆರ್ಥಿಕ ನೀತಿಗಳು, ಹಾಗು ಇವುಗಳಿಂದ ಕರ್ನಾಟಕದ ಕೃಷಿಯ ಮೇಲಿನ ಪರಿಣಾಮಗಳನ್ನು ಬೆಂಗಳೂರಿನ ISEC ಸಂಸ್ಥೆಯ ಡಾಕ್ಟರ್ ಆರ್. ಎಸ್ ದೇಶಪಾಂಡೆ ಮತ್ತು ಜೆ. ಪ್ರಚಿತರವರು "WTO and Agricultural Policy in Karnataka" ಎಂಬ ವರದಿಯಲ್ಲಿ ಸವಿವರವಾಗಿ ತಿಳಿಸಿದ್ದಾರೆ. ಈ ಲೇಖನ, ಈ ವರದಿಯ ಹಲವು ವಿಷಯಗಳನ್ನು ಬಳಸಿಕೊಂಡಿದೆ.

WTO

೧೯೪೭ ನಲ್ಲಿ ಶುರುವಾದ General Agreement on Trade and Tariff (GATT) ಒಪ್ಪಂದದ ವರ್ಷಗಳ ಚರ್ಚೆಯ ಫಲವೇ World Trade Organization (WTO). ಈ ಸಂಸ್ಥೆಯನ್ನು ಹುಟ್ಟುಹಾಕುವುದರ ಬಗ್ಗೆ ಉರುಗ್ವೇ ರೌಂಡಿನ ಮಾತುಕತೆಯಲ್ಲಿ (೧೯೮೬) ಪ್ರಸ್ತಾಪವಾಯಿತು, ಹಾಗು ಅಂತರ್ರಾಷ್ಟ್ರೀಯ ವಾಣಿಜ್ಯ ವಾಹಿವಾಟನ್ನು ನಿಭಾಯಿಸಲು ಶುರುವಾದ ೧೯೯೫ರಲ್ಲಿ WTO ಹುಟ್ಟಿತು . WTO ಹುಟ್ಟುವುದಕ್ಕೆ ಮೊದಲೇ ಹಲವಾರು ಒಪ್ಪಂದಗಳಿದ್ದವು. ಆದರೆ, WTO ಬಂದ ಮೇಲೆ, ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಮುಕ್ತಮಾರುಕಟ್ಟೆಯಲ್ಲಿ ವಾಣಿಜ್ಯ ನಡೆಯಲು ಅನುವುಮಾಡಿಕೊಡುವುದರಲ್ಲಿ ಹೊಸ ಚೈತನ್ಯ ಬಂದಿತು. ಆದರೆ, ಇದರ ಹಿಂದೆಯೇ WTO ಶ್ರೀಮಂತ ದೇಶಗಳ ಸಹಾಯಕ್ಕಾಗಿಯೇ ಹುಟ್ಟಿದ ಸಂಸ್ಥೆಯೆಂದು ಕುಖ್ಯಾತಿಯೂ ಬಂತು. WTO ಶೃಂಗಸಭೆಗಳು ಯಾವಾಗಲೂ ವಿವಾದಾಸ್ಪದವೇ.ಪರಿಸರವಾದಿಗಳು, ಸರ್ಕಾರೇತರ ಸಂಸ್ಥೆಗಳ ಗದ್ದಲಗಳು, ಅವುಗಳನ್ನು ಹತ್ತಿಕ್ಕಲು ಬಳಸುವ ವಿವಾದಾಸ್ಪದ ತಂತ್ರಗಳು, ಮುಂದುವರೆಯುತ್ತಿರುವ ದೇಶಗಳು ಒಪ್ಪಂದಕ್ಕೆ ರಾಜಿಯಾಗದೇ ಹೊರನಡೆಯುವುದೂ ಹೀಗೆ WTO ಸಭೆಗಳ ವಿವಾದಗಳು ಹಲವು.

ಮೂಲತ:ದೇಶಗಳ ನಡುವೆ ವಾಣಿಜ್ಯವನ್ನು ಸುಲಭವಾಗಿಯೂ, ನ್ಯಾಯಯುತವಾಗಿಯೂ ನಡೆಯುವಂತೆ ಅವಕಾಶ ಕಲ್ಪಿಸಲು ಶುರುವಾದ ಸಂಸ್ಥೆ, WTO. ಈ ನಿಟ್ಟಿನಲ್ಲಿ, ಎಲ್ಲಾ ದೇಶಗಳ ನಡುವೆ ಮುಕ್ತಮಾರುಕಟ್ಟೆಗಳನ್ನು ಕಲ್ಪಿಸುವುದು, ಅಮದು ಮತ್ತು ರಫ್ತುಗಳಲ್ಲಿ ವ್ಯತ್ಯಾಸವನ್ನು ಇಲ್ಲದಾಗಿಸುವುದು,ವಾಣಿಜ್ಯಕ್ಕೆ ನಿರ್ಭಂದನೆಗಳನ್ನು ತೆಗೆದು ಹಾಕುವುದು, ಅದರ ಮೂಲ ಉದ್ದೇಶ. ಕೃಷಿಯಲ್ಲಿ ಈ ಗುರಿಗಳನ್ನು ಸಾಧಿಸಲು WTO ನಾಲ್ಕು ಮುಖ್ಯ ಮಾರ್ಗಗಳನ್ನು ಅನುಸರಿಸುತ್ತದೆ.

  • ಇತರೆ ದೇಶಗಳು ಮತ್ತೊಂದು ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲು ಆಡ್ಡಿಯಾಗುವ ನೀತಿನಿರ್ಭಂದನೆಗಳನ್ನು ತೆಗೆದು ಹಾಕುವುದು .
  • ದೇಶದ ರಫ್ತುಗಳನ್ನು ರಕ್ಷಿಸಲು ಉಪಯೋಗಿಸುವ ಸಬ್ಸಿಡಿಗಳನ್ನು ಮತ್ತು ರಿಯಾಯತಿಗಳನ್ನು ತೆಗೆದು ಹಾಕುವುದು.
  • ದೇಶೀಯ ಮಾರುಕಟ್ಟೆಯಲ್ಲಿ ಅಸ್ವಾಭಾವಿಕವಾಗಿ ಬೆಲೆಗಳನ್ನು ಕುಗ್ಗಿಸುವ ನೀತಿಗಳನ್ನು ತೆಗೆದು ಹಾಕುವುದು.
  • ರಫ್ತಾಗುವ ಉತ್ಪನ್ನಗಳ ಗುಣಮಟ್ಟ ಕಾಪಾಡಲು ಉತ್ಪನ್ನಗಳನ್ನು ಪ್ರಮಾಣಬದ್ಧಗೊಳಿಸುವುದು.

ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನಗಳಿಸಿರುವುದರಿಂದ WTO ಒಪ್ಪಂದಗಳಲ್ಲಿ ಕೃಷಿ ಕ್ಷೇತ್ರವೂ ಪ್ರಮುಖವಾಗಿ ಕಂಡುಬರುತ್ತದೆ. ಮೇಲುನೋಟಕ್ಕೆ ಈ ನೀತಿಗಳು ಭಾರತದಂತಹ ಮುಂದುವರೆಯುತ್ತಿರುವ ದೇಶಕ್ಕೆ ಸಂಚಾಕಾರ ತರುವಂತವು . ಆದರೆ, ಸೈದ್ಧಂತಿಕವಾಗಿ ಇವುಗಳಿಂದ ನಮ್ಮ ದೇಶದ ಕೃಷಿಗೆ ಒಳ್ಳೆಯದೂ ಆಗಬಹುದು. ಉದಾಹರಣೆಗೆ, ಅಮೇರಿಕ ಅಥವ ಬ್ರಿಟನ್ನಿನಂತಹ ಅಭಿವೃದ್ಧಿ ಹೊಂದಿದ ದೇಶಗಳು ಮೇಲಿನ ನೀತಿಗಳನ್ನು ಅನುಸರಿಸಿ ತಮ್ಮ ಕೃಷಿ ಕ್ಷೇತ್ರವನ್ನು ರಕ್ಷಿಸಿಕೊಳ್ಳುತ್ತಿದ್ದು, WTO ಪರಿಣಾಮವಾಗಿ ಅಲ್ಲಿನ ಮಾರುಕಟ್ಟೆಗಳಿಗೆ ಭಾರತದ ಉತ್ಪನ್ನಗಳು ನಿರ್ಭಂದರಹಿತವಾಗಿ ಹೋಗುವ ಅವಕಾಶ ಲಭ್ಯವಾದರೆ ಅದರಿಂದ ಭಾರತಕ್ಕೆಲಾಭವೇ. ಜೊತೆಗೆ, WTO ನಲ್ಲಿ ದೇಶಗಳನ್ನು ಒಂದೇ ತರಹ ವೀಕ್ಷಿಸುವುದಿಲ್ಲ. ಮುಂದುವರೆದ ದೇಶಗಳು, ಮುಂದುವರೆಯುತ್ತಿರುವ ದೇಶಗಳು ಹಾಗು ಹಿಂದುಳಿದಿರುವ ದೇಶಗಳು ಎಂದು ವಿಂಗಡನೆಗಳಿವೆ. ಮುಂದುವರೆದ ದೇಶಗಳಲ್ಲಿ ಹೆಚ್ಚಿನ ಸುಧಾರಣೆ ಕಮ್ಮಿ ಕಾಲಾವಕಾಶದಲ್ಲಿ, ಹಾಗು ಮುಂದುವರೆಯುತ್ತ್ತಿರುವ ದೇಶಗಳಿಗೆ ಕಮ್ಮಿ ಬದಲಾವಣೆ, ಹೆಚ್ಚಿನ ಕಾಲಾವಕಾಶದಲ್ಲಿ ಹೀಗೆ ಹಲವು ರೀತಿಯ ರಿಯಾಯತಿಗಳನ್ನು ಕೊಡುತ್ತದೆ ಮುಂದುವರೆಯುತ್ತಿರುವ ದೇಶಗಳಿಗೆ. ಉದಾಹರಣೆಗೆ,

  • ಅಭಿವೃದ್ಧಿ ಹೊಂದಿದ ದೇಶಗಳು ದೇಶೀಯ ವಾಣಿಜ್ಯದಲ್ಲಿ ಕೊಡುವ ಸಹಾಯಧನವನ್ನು ಆರು ವರ್ಷಗಳಲ್ಲಿ ಒಟ್ಟಾರೆ ಮೌಲ್ಯದ ೨೦% ಕಮ್ಮಿ ಮಾಡಬೇಕಾದರೆ ಮುಂದುವರೆಯುತ್ತಿರುವ ದೇಶಗಳು ಹತ್ತು ವರ್ಷಗಳಲ್ಲಿ ೧೩.೩% ಕಮ್ಮಿ ಮಾಡಿದರೆ ಸಾಕು.
  • ಸಾರ್ವಜನಿಕ ಹಿತಾಸಕ್ತಿಯಿಂದ ಸಹಾಯ ಬೇಕೇಬೇಕಾದ ಕೆಲವು ಉತ್ಪನ್ನಗಳಿಗೆ (green box products)ಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಟ್ಟಾರೆ ಮೌಲ್ಯದ ೫%ರಷ್ತು ಸಹಾಯಧನ ಉಳಿಸಿಕೊಳ್ಳಬಹುದು ಮತ್ತು ಮುಂದುವರೆಯುತ್ತಿರುವ ದೇಶಗಳು green box ಉತ್ಪನ್ನಗಳಿಗೆ ಶೇಕಡಾ ೧೦ರಷ್ಟು ಸಹಾಯವನ್ನು ಉಳಿಸಿಕೊಳ್ಳಬಹುದು.

ಒಟ್ಟಿನಲ್ಲಿ WTO ನಲ್ಲಿ ಮುಂದುವರೆಯುತ್ತಿರುವ ದೇಶಗಳ ಹಿತಾಸಕ್ತಿಗಳನ್ನು ಕಾಪಾಡಲು ನೀತಿನಿಯಮಗಳ ಅವಕಾಶವಂತೂ ಇದೆ. ಆದರೆ, ವಾಸ್ತವದಲ್ಲಿ ಹಲವು ರೀತಿಯ ತಾರ್ಕಿಕ, ರಾಜಕೀಯ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಅಂಶಗಳ ಲಾಭಪಡೆಯಲು ಅಡ್ಡಿಯಿದೆ. ಉದಾಹರಣೆಗೆ

  • ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಲು, ಅದಕ್ಕಿಂತ ಹೆಚ್ಚಾಗಿ ಉತ್ಪನ್ನಗಳ ತೂಕ, ಚಹರೆ, ಜಾತಿಗಳಲ್ಲಿ ಸಮಾನತೆ ತರಲು ಭಾರತದ ಕೃಷಿಯಂತಹ ವೈವಿಧ್ಯಮಯ ವಲಯಕ್ಕೆ ಬಹಳ ಕಷ್ಟ.
  • ಆಧುನಿಕ ಕೃಷಿಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ಇತರ ರಾಷ್ಟ್ರಗಳಿಗಿಂತ ಇಳುವರಿ ಕಡಿಮೆ ಇರುವ ನಮ್ಮ ರಾಷ್ಟ್ರದಲ್ಲಿ ಕೃಷಿ ಉತ್ಪನ್ನಗಳ ಮುಕ್ತ ಅಮದಿನಿಂದ ರೈತರಿಗೆ ತೀರಾ ಕಷ್ಟವಾಗಬಹುದು.
  • ಸಬ್ಸಿಡಿ, ರಿಯಾಯತಿ, ಪ್ರೋತ್ಸಾಹಧನಗಳನ್ನು ರದ್ದು ಮಾಡುವುದು ಭಾರತವನ್ನು ಮೊದಲುಗೊಂಡು ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲೂ ರಾಜಕೀಯವಾಗಿ ಬಹಳ ಕಷ್ಟ.
  • ಭೌದ್ಧಿಕ ಆಸ್ತಿಯ ಹಕ್ಕುಗಳು (Intellectual property rights) ಮತ್ತಿತರ ಮುಕ್ತ ಮಾರುಕಟ್ಟೆಯ ವಿಚಾರಗಳನ್ನು ಕರಗತ ಮಾಡಿಕೊಂಡು ಕಾನೂನಿನ ಪ್ರಕಾರ ಅವುಗಳನ್ನು ಹೇಗೆ ನಮ್ಮ ಒಳತಿಗೆ ಬಳಸಿಕೊಳ್ಳಬಹುದು ಎಂಬ ಮಾಹಿತಿ ನಮ್ಮ ರೈತರಿಗೂ, ಅಧಿಕಾರಿಗಳಿಗೂ ಸಧ್ಯಕ್ಕೆ ಒದಗಿಲ್ಲ. ಇದರಲ್ಲಿ ನುರಿತ ಮುಂದುವರೆದ ದೇಶಗಳು ಈ ವಿಚಾರಗಳನ್ನು ತಮ್ಮ ವಾಣಿಜ್ಯಕ್ಷೇತ್ರಗಳನ್ನು ರಕ್ಷಿಸಿಕೊಳ್ಳುವುದರಲ್ಲಿ ಸಫಲರಾದರೆ ಮುಕ್ತಮಾರುಕಟ್ಟೆಯ ಲಾಭ ಮಿಕ್ಕ ರಾಷ್ಟ್ರಗಳಿಗೆ ಇಲ್ಲವಾಗುತ್ತದೆ.
  • WTO ರಾಷ್ಟ್ರಗಳ ನಡುವೆ ಒಪ್ಪಂದ ಮಾಡಿಸುವ ಸಂಸ್ಥೆ. ಭಾರತ ರಾಷ್ಟ್ರ ಸರ್ಕಾರವು ಪ್ರತಿಯೊಂದು ರಾಜ್ಯ್ದದ ರೈತರ ಹಿತಾಸಕ್ತಿಯನ್ನು ಕಾಯ್ದುಕೊಂಡು ಹೋಗುವುದು ಕಷ್ಟವೆ. ಕೆಲವು ಒಪ್ಪಂದಗಳು ಕೆಲವು ರಾಜ್ಯದ, ಕೆಲವು ರೈತರಿಗೆ ಮಾತ್ರ ಅನುಕೂಲವಾಗಬಹುದು, ಕೆಲವರಿಗೆ ಅನಾನುಕೂಲವಾಗಬಹುದು.
  • ಅಂತರ್ರಾಷ್ಟ್ರೀಯ ಮಾರುಕಟ್ಟೆಗಿಂತ ನಮ್ಮ ದೇಶೀಯ ಮಾರುಕಟ್ಟೆಯೇ ಹೆಚ್ಚು ಏರುಪೇರಾಗಿರುವುದರಿಂದ, ಸರಿಯಾಗಿ ನಮ್ಮ ಬಳಕೆಗೇ ಆಹಾರದ ಪೂರೈಕೆಯಾಗದೇ ಇರುವುದರಿಂದ,ನಮ್ಮ ಉತ್ಪನ್ನಗಳ ಕ್ರಮಬದ್ಧ ರಪ್ಥು ಕಷ್ಟಕರ.

ಹೀಗೆ, WTO ಒಳ್ಳೆಯದನ್ನೇ ಮಾಡಲು ಹೊರಟಿದ್ದರೂ ಭಾರತದಂತಹ ದೇಶವು ಇದರಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವುದು ಸಾಧ್ಯ. ಭಾರತವು ತನ್ನ ಆರ್ಥಿಕ ಉದಾರೀಕರಣದಿಂದ ಹಲವು ಲಾಭಗಳನ್ನು ಪಡೆದಿರುವುದನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಉದಾರೀಕರಣದಿಂದ ಕೃಷಿವಲಯವು ಮುಕ್ತಮಾರುಕಟ್ಟೆಗೆ ಮೊದಲಿಗಿಂತ ಹೆಚ್ಚು ಹತ್ತಿರವಿದೆ. ಹಲವು ಬಗೆಯ ತಾರೀಫುಗಳನ್ನು ಕಡಿಮೆ ಮಾಡಿ, ಅಮದು ಮಾಡಿಕೊಳ್ಳಬಹುದಾದ ಉತ್ಪನ್ನಗಳು ಮತ್ತು ಅವುಗಳ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆಹಾರಧಾನ್ಯಗಳನ್ನೂ ಸೇರಿದಂತೆ ಹಲವು ಮುಖ್ಯ ಉತ್ಪನ್ನಗಳ ಅಮದು ಮತ್ತು ರಫ್ತು ನಿಯಮಗಳು ಸಡಿಲಗೊಂಡಿವೆ. ಕೆಲವೊಮ್ಮೆ ಭಾರತವು ತನ್ನ ವಾಣಿಜ್ಯನೀತಿಗಳನ್ನು ತಾನು ಸಡಿಲಗೊಳಿಸಬೇಕಾದುದಕ್ಕಿಂತ ಹೆಚ್ಚಾಗಿಯೇ ಸಡಿಲಗೊಳಿಸಿದೆ ಎಂಬ ಆಪಾದನೆಯೂ ಇದೆ. ಇದಕ್ಕೆ ತಕ್ಕಂತೆ ಹಲವು ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರದ ಕೈಹಿಡಿದು ಉದಾರೀಕರಣಕ್ಕೆ ಅತಿಯಾಗಿ ಒತ್ತುಕೊಡುವ ಬಗ್ಗೆ ಶಂಕೆಯೂ ಇದೆ.

ಒಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ, ಉದಾರೀಕರಣದಿಂದ ಕೃಷಿವಲಯದಲ್ಲಿ ಪ್ರಗತಿಯು ಕಂಡುಬರುತ್ತದೆಯಾದರೂ ಹೇಳಿಕೊಳ್ಳುವಂತಹ ಅಭಿವೃದ್ಧಿಯು ಇನ್ನೂ ಆಗಿಲ್ಲ. ಕರ್ನಾಟಕ ಈ ಸಂದರ್ಭದಲ್ಲಿ ವಿಚಿತ್ರ ಪರಿಸ್ಥಿತಿಯಲ್ಲಿದೆ. ಉದಾರೀಕರಣಕ್ಕಿಂತ ಮುಂಚೆಯೇ ಕರ್ನಾಟಕ ಕಮರ್ಶಿಯಲ್ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳ ಕಂಡಿದೆ. ಕಾಫಿ, ಗೋಡಂಬಿ, ಅಡಿಕೆ, ಹಣ್ಣುಗಳು, ರೇಷ್ಮೆ, ತಂಬಾಕು, ತರಕಾರಿಗಳು, ಹೂವುಗಳು, ಮೆಕ್ಕೆ ಜೋಳ ಮುಂತಾದ ಉತ್ಪನ್ನಗಳಲ್ಲಿ ಕರ್ನಾಟಕ ಸಾಕಷ್ಟು ಮುಂದಿದೆ. ಆದರೆ, ಹಲವು ಬೆಳೆಗಳ ಇಳುವರಿ, ಉತ್ಪಾದನಾ ವೆಚ್ಚ, ರಫ್ತು ಮಾರುಕಟ್ಟೆಗೆ ಬೇಕಾದ ಉತ್ಪಾದನಾ ಕ್ರಮಗಳು, ಮಾರುಕಟ್ಟೆಗಳ ಲಭ್ಯತೆ, ಕಾರ್ಯಾಚರಣೆ, ತಕ್ಕ ಬೆಲೆಗಳು ಮುಂತಾದ ವಿಷಯಗಳಲ್ಲಿ ಬೇರೇ ರಾಜ್ಯಗಳಿಗಿಂತ ನಾವು ಹಿಂದೆ ಬಿದ್ದಿದ್ದೇವೆ. ಕರ್ನಾಟಕಕ್ಕೆ ಉದಾರೀಕರಣದ ಲಾಭಪಡೆಯಲು, ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಒಳಿತಾಗುವಂತಹ ಲಾಬಿಯೇ ಇಲ್ಲವಾಗಿರುವುದೂ ಮತ್ತೊಂದು ಮುಳಿವಾಗಿದೆ. ಆದರೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಾರುಕಟ್ಟೆಯ ಏರುಪೇರಿಗೆ ಮಾತ್ರ ರಾಜ್ಯದ ಕೃಷಿವಲಯ ಹೊರತಾಗಿಲ್ಲ.ಹಾಗಾಗಿ ಸಧ್ಯದ ಪರಿಸ್ಥಿತಿಯಲ್ಲಿ, ಉದಾರೀಕರಣಕ್ಕೆ ಸಂಬಂಧಪಟ್ಟ ಯಾವುದೇ ಬೆಳವಣಿಗೆಯನ್ನು ಅನುಮಾನಾಸ್ಪದವಾಗಿಯೇ ನೋಡಬೇಕಾಗಿದೆ, ಅಮೂಲಾಗ್ರವಾಗಿ ಅದರ ಕಾರಣ-ಪರಿಣಾಮಗಳ ಪರಿಶೋಧನೆಯಾಗಬೇಕಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ, ಭಾರತವಾಗಲೀ, ಕರ್ನಾಟಕವೇ ಆಗಲಿ, ಕೃಷಿಯಲ್ಲಿ WT ನಿಂದಾಗಬಹುದಾದ ಲಾಭಗಳನ್ನು ಪೂರ್ಣಮಟ್ಟದಲ್ಲಿ ಪಡೆಯುತ್ತಿಲ್ಲ. ಈ ಲಾಭಗಳನ್ನು ಪಡೆಯಲು ನಮ್ಮ ಯೋಚನಾಲಹರಿಯಿಂದ ಹಿಡಿದು ಹಲವು ಮೂಲಭೂತ ಪರಿವರ್ತನೆಗಳ ಅವಶ್ಯಕತೆಯಿದೆ. . ಈ ಬದಲಾವಣೆಗಳು ಬೇಕೆ ಅಥವ ಅಭಿವೃದ್ಧಿಯು ಇದರ ಹೊರತಾಗಿಯೂ ಸಾಧ್ಯವೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬಹುದು.

ಅಭಿನಂದನೆಗಳು.
ನಿಮ್ಮ ಎರಡೂ ಬರಹವನ್ನು ಓದಿದೆ.
ಕೃಷಿಯ ಬಗ್ಗೆ ಹೆಚ್ಚು ಗೊತ್ತಿರದ ನನಗೆ ನಿಮ್ಮ ಬರಹಗಳು ಸಮಚಿತ್ತದಿಂದ ಬರೆದದ್ದು ಅನಿಸಿತು. ಕೃಷಿಯ ಬಗ್ಗೆ ಹತ್ತಿರದಿಂದ ದಕ್ಕುವ ನೋಟವನ್ನು ನಮಗೆ ನೀಡಿದ್ದೀರಿ.
ಕೃಷಿಯಂಥ ವಿಷಯವನ್ನು ಬರೆಯುವಾಗ, ಅಂತರ್‌ರಾಷ್ಟ್ರೀಯ ಅಂಶಗಳನ್ನು ಹೇಳುವಾಗ ಸರಳವಾಗಿ ಹರಿಯುವ ಭಾಷೆ ನಮ್ಮಲ್ಲಿನ್ನೂ ಬಳಕೆಗೆ ಬರಬೇಕಾಗಿದೆಯಲ್ಲವೆ? ಆ ನಿಟ್ಟಿನಲ್ಲಿ ನಿಮ್ಮದು ಒಳ್ಳೆಯ ಪ್ರಯತ್ನ.

ಅನಿವಾಸಿ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆಯಿರಲಿ.
ಹೌದು, ಇಂದು ಕೃಷಿಯ ಬಗ್ಗೆ ನಮ್ಮ ವೈಯುಕ್ತಿಕ ಅನಿಸಿಕೆಗಳಿಗಿಂತ ರಾಜ್ಯ, ರಾಷ್ಟ್ರ ಮತ್ತು ವಿಶ್ವಮಟ್ಟದಲ್ಲಿ ಕೃಷಿ ಸಂಬಂಧಿತ ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ಬರೆಯುವುದೇ ಹೆಚ್ಚು ಮುಖ್ಯ ಅನ್ನಿಸುತ್ತದೆ. ಈ ವಿಷಯಗಳು ರೈತರಿಲ್ಲದೇ ಇತರ ಪ್ರಜೆಗಳಿಗೂ ತಕ್ಕಮಟ್ಟಿಗೆ ತಿಳಿದಿರುವದು ಪ್ರಜಾತಂತ್ರದ ದೃಷ್ಟಿಯಿಂದ ಅನಿವಾರ್ಯ ಅಂತ ನನ್ನ ಭಾವನೆ.

ಈ ನಿಟ್ಟಿನಲ್ಲಿ ಈ ಲೇಖನಗಳು ಸಹಾಯವಾಗುವಂತಿದ್ದರೆ ನನಗೆ ಖುಶಿ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ