ಕೃಷಿಯಲ್ಲಿ ಜೈವಿಕ ವೈವಿಧ್ಯತೆ

ಜೈವಿಕ ವೈವಿಧ್ಯತೆ (Biodiversity) ಅಭಿವೃದ್ಧಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಹಳ ಉಪಯೋಗಿತವಾದ ಪದಪುಂಜ. ಒಂದು ಸೀಮಿತ ಪ್ರದೇಶದಲ್ಲಿರುವ ಜೀವಿಗಳ ವಿವಿಧತೆಯನ್ನು ಸೂಚಿಸುವ ಪದವೇ ಜೈವಿಕ ವೈವಿಧ್ಯತೆ. ಪ್ರಕೃತಿಯಲ್ಲಿ ನೈಸರ್ಗಿಕವಾದ ಸಮತೋಲನವನ್ನು ಕಾಪಾಡುವುದಕ್ಕೆ ಜೈವಿಕ ವೈವಿಧ್ಯತೆ ಬಹಳ ಅವಶ್ಯಕ. ಜಾಗತಿಕ ಮಟ್ಟದಲ್ಲಿ ನಾನಾಕಾರಣಗಳಿಂದ ಸಸ್ಯ-ಪ್ರಾಣಿಗಳ ವಿವಿಧತೆ ಕಡಿಮೆಯಾಗುತ್ತಿರುವುದು ಒಂದು ದೊಡ್ಡ ದುರಂತವೆಂದು, ಈ ವೈವಿಧ್ಯತೆಯನ್ನು ಉಳಿಸಲು, ಬೆಳೆಸಲು ಯೂನೈಟೆಡ್ ನೇಶನ್ಸ್ ನ Commission for Biodiversity (CBD)ಯನ್ನು ಸೇರಿದಂತೆ ಹಲವಾರು ಹೊಸ ಕಾರ್ಯಕ್ರಮಗಳು, ಒಪ್ಪಂದಗಳೂ (WTO ನಂತೆಯೇ) ನಾನಾ ಅಭಿವೃದ್ಧಿ ಸಂಸ್ಥೆಗಳಲ್ಲಿ ಶುರುವಾಗಿದೆ. ಇದೇ ವೈವಿಧ್ಯತೆ ಕೃಷಿ ಸಂಬಂಧಿತ ಪ್ರದೇಶಕ್ಕೆ ಸೀಮಿತವಾದಾಗ ಅದನ್ನು ಕೃಷಿ ಜೈವಿಕ ವೈವಿಧ್ಯತೆಯೆಂದು ಕರೆಯಬಹುದು. ಇದರಲ್ಲಿ, ನಾವು ಬೆಳೆಯುವ ಭತ್ತ, ರಾಗಿ ಜೋಳ ಮುಂತಾದ ಬೆಳೆಗಳ ವಿವಿಧ ಜಾತಿಗಳೂ, ಕಳೆಗಳನ್ನೂ ಒಳಗೊಂಡಂತೆ ಕೃಷಿ ಪ್ರದೇಶದಲ್ಲಿ ಬೆಳೆಯುವ ಹಲವು ಬಗೆಯ ಗಿಡ ಮರಗಳೂ, ಸೊಪ್ಪುಗಳೂ, ದನ, ಎಮ್ಮೆ, ಕೋಳಿ, ಕುರಿಗಳ ವಿವಿಧ ಜಾತಿಗಳೂ, ಕೃಷಿಪ್ರದೇಶದಲ್ಲಿ ಕಂಡುಬರುವ ಹುಳಹುಪ್ಪಟ್ಟೆಗಳೂ,ಕೃಷಿ ಭೂಮಿಯ ಮೇಲೆ ಹಾಗು ಭೂಮಿಯಲ್ಲಿ ಇರುವ ಸೂಕ್ಷ್ಮಾಣುಗಳೂ ಸೇರಿವೆ.

ಕೃಷಿಯು ಮನುಷ್ಯನ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಲು ರಚಿತವಾಗಿರುವ ಚಟುವಟಿಕೆಯಾದುದರಿಂದ,ಪ್ರಕೃತಿದತ್ತವಾದ, ನೈಸರ್ಗಿಕ ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ಕಷ್ಟ. ಆದರೆ ಪ್ರಕೃತಿಯನ್ನು ಮನುಷ್ಯ ಪಳಗಿಸಲಾರನೆಂಬುದೂ ಸತ್ಯ. ಹೀಗಾಗಿ ಕೃಷಿಯು, ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುತ್ತಲೇ ಮನುಷ್ಯನ ಅಗತ್ಯಗಳನ್ನೂ ಪೂರೈಸಿಕೊಳ್ಳಬೇಕಾಗಿರುವ ವಿಶಿಷ್ಟ ವೃತ್ತಿ. ಆದ್ದರಿಂದ ಪ್ರಕೃತಿಯೊಡನೆ ಸ್ಪರ್ಧೆಗಿಳಿಯದೇ ಅದರೊಳಗೇ ಸಹಬಾಳ್ವೆ ನಡೆಸುವುದು ಕೃಷಿಯಲ್ಲಿ ಅತ್ಯವಶ್ಯಕ. ಒಂದು ಪ್ರದೇಶದ ವಿಶೇಷತೆಗಳನ್ನು ಅರ್ಥೈಸಿಕೊಂಡು, ಪ್ರಾಕೃತಿಕ ಬದಲಾವಣೆಗಳು ಮತ್ತು ಮನುಷ್ಯನ ಅಗತ್ಯಗಳಲ್ಲಾಗುವ ಬದಲಾವಣೆಗಳಿಗೆ ತಕ್ಕಂತೆ ತನ್ನ ಕೃಷಿಯ ವಿಧಾನಗಳನ್ನೂ, ತಂತ್ರಜ್ಞಾನಗಳನ್ನು ಮತ್ತು ಅಭ್ಯಾಸಗಳನ್ನು ಶತಶತಮಾನಗಳಿಂದ ರೂಢಿಸಿಕೊಂಡು, ಬದಲಾಯಿಸಿಕೊಂಡು, ಒಟ್ಟಿನಲ್ಲಿ ಪ್ರಕೃತಿಗೆ ಸಡ್ದು ಹೊಡೆಯದೇ ಬಂದಿರುವ ಈ ವಿಶೇಷ ಜಾನಪದ ಜ್ಞಾನವು ಇಂದು ಪರಿಸರವಾದಿಗಳಿಗೆ, ಸುಸ್ಥಿರ ಕೃಷಿವಾದಿಗಳಿಗೆ ಬಹಳ ಪ್ರಿಯವಾದ ವಿಷಯವಾಗಿದೆ. ಆದರೆ, ಇತ್ತೀಚಿನ ಅಂದರೆ, ಹಸಿರು ಕ್ರಾಂತಿಯ ಜೊತೆ ಜೊತೆಗೆ ಬಂದ ತಂತ್ರಜ್ಞಾನಗಳು, ಅವುಗಳು ತಂದ ಬದಲಾವಣೆಗಳು, ಪ್ರಾಕೃತಿಕ ಸಮಾತೋಲನವನ್ನು ಏರುಪೇರಾಗಿಸಿದೆ ಎನ್ನುವ ದೂರು ದೊಡ್ಡದಾಗುತ್ತಲೇ ಇದೆ. ಉದಾಹರಣೆಗೆ ನಾವು ಬಳಸುವ ಕ್ರಿಮಿನಾಶಕಗಳನ್ನೇ ಗಮನಿಸಿ. ಇವುಗಳ ಬಳಕೆಯಿಂದ ಬೆಳೆಗೆ ತೊಂದರೆ ಕೊಡುವ ಕ್ರಿಮಿಗಳ ಜೊತೆಗೆ ವಿಷದಿಂದ, ಮಾಲಿನ್ಯದಿಂದ ಹಲವುಬಗೆಯ ಇತರ ಕೀಟಗಳೂ, ಪ್ರಾಣಿಗಳು ಸಾಯುತ್ತವೆ. ಅವುಗಳನ್ನು ತಿನ್ನಲು ಬರುವ ಹಕ್ಕಿಗಳ, ದುಂಬಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಬೆಳೆಗಳ ಪರಾಗಸ್ಪರ್ಶಕ್ಕೆ ಇದರಿಂದ ಕಷ್ಟವಾಗುತ್ತದೆ, ಪ್ರಾಕೃತಿಕ ಸಮತೋಲನ ತಪ್ಪುತ್ತದೆ.

ಈಗಾಗಲೇ ಇವೇ ವಿಧಾನಗಳನ್ನು ಮುಂದುವರಿಸಿಕೊಂಡು ಹೋಗಲು ಹಲವಾರು ಆರ್ಥಿಕ, ಸಾಮಾಜಿಕ ಸವಾಲುಗಳನ್ನು ಹಿಂದಿನ ಲೇಖನಗಳಲ್ಲಿ ಪ್ರಸ್ತಾಪಿಸಿದ್ದಾಗಿದೆ. ಅವುಗಳ ಜೊತೆಗೇ, ಈ ವಿಧಾನಗಳು ಪ್ರಾಕೃತಿಕವಾಗಿಯೂ ರೈತನ ಪಾಲಿಗೆ ಸವಾಲಾಗಿ ನಿಂತಿವೆ.ಈ ದೃಷ್ಟಿಯಿಂದ ಗಮನಿಸಿದಾಗ ಕೃಷಿಯಲ್ಲಿ ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ರೈತನಿಗೆ ಸಹಾಯಕಾರಿಯಾಗಬಲ್ಲದು. ಜೈವಿಕ ವೈವಿಧ್ಯತೆಯನ್ನು ಕಾಪಾಡುವುದರಿಂದ ಕೃಷಿಗೆ ಏನೇನು ಲಾಭಗಳಿವೆ, ಯಾವ ಬಗೆಯ ವೈವಿಧ್ಯತೆಯು ಪರಿಸರದ ದೃಷ್ಟಿಯಲ್ಲಿ ಒಳ್ಳೆಯದು, ಯಾವುದು ಮನುಷ್ಯನ ಆರ್ಥಿಕ ದೃಷ್ಟಿಯಲ್ಲಿ ಒಳ್ಳೆಯದು ಹೀಗೆ ಹಲವಾರು ವಿಷಯಗಳ ಕುರಿತು ಸಂಶೋಧನೆಗಳು ನಡೆದಿವೆ. ಆದರೆ ಕೃಷಿ ಪ್ರದೇಶದಲ್ಲಿರುವ ಎಲ್ಲಾ ಜೀವಿಗಳ, ಅವುಗಳ ವೈವಿಧ್ಯತೆಯ ಪೂರ್ಣ ಆಯಾಮ ಮತ್ತು ಮಾನವನ ಜೀವನದ ಮೇಲೆ ಅವುಗಳ ಸಮಗ್ರ ಪರಿಣಾಮಗಳನ್ನು ಕೂಲಂಕುಷವಾಗಿ ಅಳೆಯುವುದಾಗಲೀ ಅಥವ ವೈವಿಧ್ಯತೆಯು ಇಷ್ಟಿದ್ದರೆ, ಮನುಷ್ಯನಿಗೆ ಇಷ್ಟು ಲಾಭವಿದೆಯೆಂದಾಗಲೀ ಖಾತರಿಯಾಗಿ ತಿಳಿದುಬಂದಿಲ್ಲ.

ಕೃಷಿಯಲ್ಲಿ ಜೈವಿಕ ವೈವಿಧ್ಯತೆಯನ್ನು ಉತ್ತೇಜಿಸಲು ಅಥವ ನಿರ್ಭಂದಿಸಲು ನೀತಿನಿಯಮಗಳನ್ನು ರೂಪಿಸುವುದಕ್ಕೆ ಹಲವಾರು ತೊಂದರೆಗಳಿವೆ. ರಾಜ್ಯಮಟ್ಟದಲ್ಲಿ ನೋಡಿದಾಗ, ಮೊದಲಿಂದಲೂ, ಕರ್ನಾಟಕದಲ್ಲಿ ಬೆಳೆಯುವ ಬೆಳೆಗಳಲ್ಲಿ (Crop diversity) ಬಹಳ ಹೆಚ್ಚಿನ ವೈವಿಧ್ಯತೆಯಿದೆ. ಕೊಡಗಿನಲ್ಲಿನ ಬೆಳೆ ಮೈಸೂರಿನಲ್ಲಿ ಬೆಳೆಯಲಾಗದು. ಮೈಸೂರಿನ ಬೆಳೆ ಚಿತ್ರದುರ್ಗದಲ್ಲೋ ಧಾರವಾಡದಲ್ಲಿ ಬೆಳೆಯಲು ಕಷ್ಟ. ಅಲ್ಲಿನ ಬೆಳೆಗಳು ಗುಲ್ಬರ್ಗದಲ್ಲಿಲ್ಲ. ಒಟ್ಟಿನಲ್ಲಿ ಪ್ರಾದೇಶಿಕವಾಗಿ ಕರ್ನಾಟಕದಲ್ಲಿ ಹಲವು ಬಗೆಯ ಬೆಳೆಗಳು, ಅದಕ್ಕೆ ತಕ್ಕ ಜಾನುವಾರು ಪ್ರಭೇಧಗಳೂ ಇವೆ. ಈ ವಿವಿಧತೆಗೆ ಕರ್ನಾಟಕದ ವಿವಿಧ ಪ್ರದೇಶಗಳ ಹವಾಮಾನ, ವಾತಾವರಣಗಳ ವೈಪರೀತ್ಯವೇ ಕಾರಣ. ಆದರೆ, ಜೈವಿಕ ವೈವಿಧ್ಯದ ಪ್ರಯೋಜನಗಳು, ಒಂದ ಜಮೀನಿನಲ್ಲಿರುವ ವಿವಿಧತೆಯ ಮೇಲೆಯೇ ಅವಲಂಬಿತವಾಗಿರುತ್ತದೆ ಹೊರತು ಒಂದು ಪ್ರದೇಶದ ಒಟ್ಟಾರೆ ಜೈವಿಕ ವೈವಿಧ್ಯತೆಯ ಮೇಲಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಕರ್ನಾಟಕದಲ್ಲಿ ಸರಾಸರಿ ಪ್ರತಿಯೊಬ್ಬ ರೈತನ ಜಮೀನಿನಲ್ಲಿ ಎಷ್ಟು ವೈವಿಧ್ಯತೆಯಿದೆ ಎಂದು ತಿಳಿಸುವ ಅಧ್ಯಯನಗಳು ತೀರಾ ಕಡಿಮೆ. ಹಾಗಾಗಿ ಪ್ರತಿಯೊಬ್ಬ ರೈತನಿಗೆ ಜೈವಿಕ ವೈವಿಧ್ಯತೆಯಿಂದ ಸರಾಸರಿ ಎಷ್ಟು ಪ್ರಯೋಜನವಾಗಿದೆ ಎಂದು ಹೇಳುವುದೂ ಕಷ್ಟವೇ. ಹೀಗಾಗಿ, ರಾಜ್ಯಮಟ್ಟದ ಅಥವ ಜಿಲ್ಲಾ ಮಟ್ಟದ ಅಧ್ಯಯನಗಳಿಂದ ಜೈವಿಕ ವೈವಿಧ್ಯತೆಯ ನೀತಿ ನಿಯಮಗಳನ್ನು ರೂಪಿಸುವುದು ಕಷ್ಟಕರ. ಅದಕ್ಕೆ, ರೈತರ ಮಟ್ಟದಲ್ಲಿ ಅಥವ ಒಂದು ಹಳ್ಳಿಯ ಮಟ್ಟದಲ್ಲಿ ಜೈವಿಕ ವೈವಿಧ್ಯತೆಯ ಖಂಡಿತ ಪರಿಣಾಮ ಪ್ರಮಾಣಗಳ ಅಧ್ಯಯನವಾಗಬೇಕಾಗಿದೆ.

ಆದರೆ, ಹಲವಾರು ಅಧ್ಯಯನ ಸಂಶೋಧನೆಗಳಿಂದ ಕೃಷಿಯಲ್ಲಿ ಜೈವಿಕ ವೈವಿಧ್ಯತೆಯನ್ನು ಕಾಪಾಡುವುದರಿಂದ ಸ್ಥೂಲವಾಗಿ ಕೆಲವು ಆರ್ಥಿಕ, ಸಾಮಾಜಿಕ, ಪ್ರಾಕೃತಿಕ ಪ್ರಯೋಜನಗಳಿವೆ ಎಂದು ಹೇಳಬಹುದು.

  • ಬೆಳೆಯುವ ಬೆಳೆಗಳಲ್ಲಿ ವೈವಿಧ್ಯತೆಯಿದ್ದರೆ ಯಾವುದಾದರು ಒಂದು ಬೆಳೆ ಕೈಕೊಟ್ಟರೆ ಅಥವ ಬೆಲೆ ಕುಸಿದರೆ, ರೈತನಿಗೆ ಭಾರಿ ನಷ್ಟವಾಗುವುದಿಲ್ಲ.
  • ಯಾವುದಾದರೂ ಬೆಳೆಗೆ ರೋಗ ಬಡಿದರೆ, ಕೃಷಿಯಲ್ಲಿ ವೈವಿಧ್ಯತೆಯಿರುವುದರಿಂದ ತಟ್ಟನೆ ಎಲ್ಲಾ ಬೆಳೆಗಳಿಗೂ ರೋಗ ಹರಡುವ ಸಂಭವ ಕಡಿಮೆ. ಜೊತೆಗೆ ಜಮೀನಿನಲ್ಲಿ ಕೀಟಗಳೂ ಹಾಗು ಸೂಕ್ಷ್ಮಜೀವಿಗಳ ವೈವಿಧ್ಯತೆ ಚೆನ್ನಾಗಿದ್ದರೆ, ರೋಗ ಬರುವ ಕ್ರಿಮಿಕೀಟಗಳ ವೃದ್ಧಿಗೂ ಕಡಿವಾಣವಿರಬಹುದು.
  • ಕೃಷಿಯಲ್ಲಿನ ವೈವಿಧ್ಯತೆ, ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಿದ್ದರೆ, ಆ ಪ್ರದೇಶದ ವಾತಾವರಣ ಹಾಗು ಹವಾಮಾನದ ವೈಪರೀತ್ಯಗಳಿಗೆ ಹೊಂದಿಕೊಂಡಿರುತ್ತವೆ, ಆದ್ದರಿಂದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹೆಚ್ಚು ಹಾನಿ ಆಗದೇ ಇರಬಹುದು, ಜೊತೆಗೆ, ಕೃಷಿಪ್ರದೇಶದ ಫಲವತ್ತತೆಯನ್ನು ಕುಂದಿಸದಂತೆಯೂ ನೋಡಿಕೊಳ್ಳಬಹುದು.
  • ಕೃಷಿಯಲ್ಲಿ ವೈವಿಧ್ಯತೆಯಿದ್ದರೆ ಮನುಷ್ಯನು ಸೇವಿಸುವ ಆಹಾರದಲ್ಲಿಯೂ ವೈವಿಧ್ಯತೆಯಿರುತ್ತದೆ. ಇದರಿಂದ ಶರೀರಕ್ಕೆ ಬೇಕಾಗುವ ಹಲವು ಪೌಷ್ಠಿಕಾಂಶಗಳ ಪೂರೈಕೆಯೂ ಆಗುತ್ತದೆ.
  • ಸಣ್ಣ ಹಿಡುವಳಿದಾರರು ಸಾಲ ಸೋಲವಿಲ್ಲದೇ, ಆಹಾರ ಭದ್ರತೆಯನ್ನು ಕಂಡುಕೊಂಡು, ತಮ್ಮ ಸಣ್ಣಪುಟ್ಟ ಆಸ್ತಿಗಳ ಹಕ್ಕುಗಳನ್ನು ಉಳಿಸಿಕೊಳ್ಳಲು, ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಳ್ಳುವುದರಲ್ಲೂ ದೇಶೀಯ ಪದ್ಧತಿಯಲ್ಲಿ ಜೈವಿಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಸಹಾಯಕಾರಿಯಾಗಿವೆ ಎಂಬ ಅಂಶಗಳನ್ನು ಡಿ.ಡಿ.ಎಸ್ (ಡೆಕ್ಕನ್ ಡೆವೆಲಪ್‍ಮೆಂಟ್ ಸೊಸೈಟಿ, ಮೇಧಕ್, ಆಂಧ್ರ), ಗ್ರೀನ್‍ಫೌಂಡೇಶನ್ (ಬೆಂಗಳೂರು) ಮುಂತಾದ ಹಲವು ಎನ್.ಜಿ.ಓಗಳ ಅಧ್ಯಯನಗಳು ತೋರಿಸಿವೆ.
  • ಜೈವಿಕ ವೈವಿಧ್ಯತೆಯು ರೈತನ ಹಲವು ಅಗತ್ಯಗಳನ್ನು (ಫಸಲಿನ ಜೊತೆಗೆ ಮೇವು, ಗೊಬ್ಬರ, ಸೊಪ್ಪು ಇತ್ಯಾದಿ) ಪೂರೈಸಬಹುದಾಗಿದೆ.

ಜೈವಿಕ ವೈವಿಧ್ಯತೆಯಿಂದ ಕೆಲವೊಮ್ಮೆ ಕೆಡಕೂ ಆಗಬಹುದು.

  • ಒಬ್ಬ ರೈತನಿಗೆ ಬರಬಹುದಾದ ಗರಿಷ್ಠ ಆದಾಯ ಜೈವಿಕ ವೈವಿಧ್ಯತೆಯಿಂದ ಖಂಡಿತ ಕುಂಟಿತವಾಗುತ್ತದೆ.

ಉದಾಹರಣೆಗೆ ವೆನಿಲ್ಲ ಬೆಳೆ ತೆಗೆದುಕೊಳ್ಳಿ. ಸಧ್ಯಕ್ಕೆ ಅದರಿಂದ ಅತ್ಯಧಿಕ ಲಾಭವಿದೆ ಎಂದು ನಂಬೋಣ. ನಿಮಗೆ ೨ ಎಕರೆ ಜಮೀನಿದೆ. ನೀವು ಒಂದು ಸೀಸನ್ನಿನಲ್ಲಿ ಒಂದು ಎಕರೆ ವೆನಿಲ್ಲಾ, ಮತ್ತುಳಿದ ಒಂದು ಎಕರೆಯಲ್ಲಿ ತರಕಾರಿ ಕಾಳುಗಳು ಹೀಗೆ ಮೂರು ನಾಲ್ಕು ಬೆಳೆಗಳನ್ನು ಹಾಕಿದರೆ ನಿಮ್ಮ ಜಮೀನಿನ ವೈವಿಧ್ಯತೆಯೇನೋ ಹೆಚ್ಚೇ ಇರುತ್ತದೆ. ಫಸಲು ಚೆನ್ನಾಗಾದರೆ ನಿಮಗೆ ಲಾಭವೂ ದೊರಕುತ್ತದೆ. ಆದರೆ ಪೂರ್ತಿ ೨ ಎಕರೆಗೆ ವೆನಿಲ್ಲ ಹಾಕಿದ್ದರೆ ನಿಮ್ಮ ಲಾಭ ಇದಕ್ಕಿಂತಲೂ ಹೆಚ್ಚಾಗಿಯೇ ಇರುತ್ತಿತ್ತು. ಆದರೆ, ಒಂದು ವೇಳೆ ವೆನಿಲ್ಲ ಕೈ ಕೊಟ್ಟಿತು ಅಂದುಕೊಂಡರೆ, ೨ ಎಕರೆ ಪೂರ್ತಿ ವೆನಿಲ್ಲ ಬೆಳೆದ ರೈತ ಸಿಕ್ಕಾಪಟ್ಟೆ ನಷ್ಟ ಅನುಭವಿಸುತ್ತಾನೆ. ಮೊದಲಿನ ರೈತ ವೆನಿಲ್ಲಾದಲ್ಲಿ ನಷ್ಟ ಅನುಭವಿಸಿದರೂ ಇನ್ನೊಂದು ಎಕರೆಯಲ್ಲಿ ಹೇಗೂ ನಿಭಾಯಿಸಿಕೊಳ್ಳುತ್ತಾನೆ.

  • ಎಲ್ಲಾ ರೀತಿಯ ಜೈವಿಕ ವೈವಿಧ್ಯತೆಗಳು ಕೃಷಿಗೆ ಸಹಾಯಕಾರಿಯಲ್ಲ.

ಉದಾಹರಣೆಗೆ ವೆನಿಲ್ಲ ಬೆಳೆಯನ್ನೇ ತೆಗೆದುಕೊಳ್ಳಿ. ನಿಮ್ಮ ಜಾಗದಲ್ಲಿ ಇತರ ಬೆಳೆಗಳ ಜೊತೆ ಇದೂ ಇದ್ದರೆ, ಖಂಡಿತ, ನಿಮ್ಮ ಜಾಗದ ಜೈವಿಕ ವೈವಿಧ್ಯತೆ ಹೆಚ್ಚಾಗುತ್ತದೆ. ಆದರೆ, ಅದು ಪ್ರಾಕೃತಿಕ ಏರುಪೇರುಗಳಿಗೆ ಹೊಂದಿಕೊಳ್ಳುತ್ತದೆಯೋ, ಅಥವ ಆಹಾರದಲ್ಲಿ ವೈವಿಧ್ಯತೆ ನಿಮಗೆ ದೊರೆಯುತ್ತದೆಯೋ ಇಲ್ಲವೋ, ಇದನ್ನು ಹೇಳಲು ಬರುವುದಿಲ್ಲ.

  • ನೈಸರ್ಗಿಕವೆಂದ ಮಾತ್ರಕ್ಕೆ ಎಲ್ಲಾ ತರಹದ ಸಸ್ಯಗಳೂ, ಪ್ರಾಣಿಗಳು ಕೃಷಿಗೆ ಪ್ರಯೋಜನಗಳನ್ನು ತಂದುಕೊಡುವುದಿಲ್ಲ.

ಉದಾಹರಣೆಗೆ, ಐದಾರು ಬಗೆಯ ಕಳೆಗಳೂ, ಕೀಟಗಳೋ ನಿಮ್ಮ ಜಮೀನಿನಲ್ಲಿದ್ದು ವೈವಿಧ್ಯತೆಯನ್ನು ವೃದ್ಧಿಸುತ್ತಲೇ ನಿಮ್ಮ ಫಸಲನ್ನೇ ನುಂಗಿ ಹಾಕಿಬಿಡಬಹುದು.

ಮೇಲೆ ಹೇಳಿದ ಲಾಭ ನಷ್ಟಗಳನ್ನು ಹಲವು ಸಂಶೋಧನೆಗಳು ಸಾಬೀತು ಪಡಿಸಿದ್ದರೂ, ಇವುಗಳ ಪ್ರಮಾಣಗಳು ಜೈವಿಕ ವೈವಿಧ್ಯತೆಯ ಪ್ರಾಯೋಗಿಕ ಅರ್ಥದ ಮೇಲೆ ಅವಲಂಬಿತವಾಗಿರುತ್ತದೆ. ಕೃಷಿಗೆ ಸಂಬಂಧಿಸಿದಂತೆ ಜೈವಿಕ ವೈವಿಧ್ಯತೆಗೆ ಎರಡು ಬಗೆಯ ಜನಪ್ರಿಯ ಅರ್ಥಗಳಿವೆ.

  • ಜಾನಪದಜ್ಞಾನ ಪ್ರೇರಿತವಾದ ದೇಸೀ ಪದ್ಧತಿಯ ಜೈವಿಕ ವೈವಿಧ್ಯತೆ

ಇದರಲ್ಲಿ ಮುಖ್ಯವಾದ ಅಂಶವೆಂದರೆ, ವೈವಿಧ್ಯತೆಯನ್ನು ಕಾಪಾಡಲು ಮತ್ತು ಬೆಳೆಸಲು, ಆಯಾ ಪ್ರದೇಶಕ್ಕೆ ತಕ್ಕದಾದ ದೇಸೀಯ ತಳಿಗಳನ್ನೂ, ದೇಸೀ ವಿಧಾನಗಳನ್ನು ಬಳಸುವುದು. ಇದು ಇತರ ದೇಸಿ ಕೃಷಿ ವಿಧಾನಗಳ ಜೊತೆ ಬೆರೆತಿರುತ್ತದೆ. ಈ ಅರ್ಥವನ್ನು ನೈಸರ್ಗಿಕ ಕೃಷಿಕಾರರು, ಸರ್ಕಾರೇತರ ಸಂಸ್ಥೆಗಳು ಮತ್ತು ಪರಿಸರವಾದಿಗಳು ಹೆಚ್ಚಾಗಿ ಬಳಸುತ್ತಾರೆ. ಈ ಬಗೆಯ ವೈವಿಧ್ಯತೆಯು ರೈತನನ್ನು ಕಷ್ಟದಿಂದ ಪಾರುಮಾಡುತ್ತದೆ ಎಂಬುದು ಇವರ ವಾದ.ಈ ಬಗೆಯ ವೈವಿಧ್ಯತೆಯನ್ನು ಮಳೆಯಾಶ್ರಿತ, ಸಣ್ಣ ಹಿಡುವಳಿ ರೈತರು ತಲೆತಲಾಂತರಗಳಿಂದ ಅಭ್ಯಯಿಸುತ್ತಾ ಬಂದಿದ್ದಾರೆ. ಈ ಪದ್ಧತಿ ವಿನಾಶದ ಅಂಚಿನಲ್ಲಿದೆ.

  • ಅಧಿಕ ಆರ್ಥಿಕ ಲಾಭ, ಅಧಿಕ ಇಳುವರಿ ಕೊಡುವ ತಳಿಗಳಿಗೆ ಒತ್ತು ಕೊಟ್ಟು ಅವುಗಳಿಂದ ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು

ಕಮ್ಮಿ ಲಾಭದ, ಕಮ್ಮಿ ಇಳುವರಿಯಿರುವ ತಳಿಗಳನ್ನು (ಹೆಚ್ಚಾಗಿ ರಾಗಿ ಜೋಳ ನವಣೆಗಳಂತಹ ಧಾನ್ಯಗಳು) ತೊರೆದು, ವಾಣಿಜ್ಯ ಬೆಳೆಗಳನ್ನು, ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಬೆಳೆಗಳನ್ನು ಅಳವಡಿಸಿಕೊಳ್ಳುವುದು,ಅವುಗಳನ್ನು ಸಂಸ್ಕರಿಸಿ, ಉತ್ಪನ್ನಗಳಲ್ಲಿ ವೈವಿಧ್ಯತೆಯನ್ನು ತರುವುದು. ಈ ಅರ್ಥವನ್ನು ಹೆಚ್ಚಾಗಿ ಸರ್ಕಾರಿ ಸಂಸ್ಥೆಗಳು, ಉದ್ಯಮಿಗಳು, ಮ್ಯಾನೇಜ್‍ಮೆಂಟ್ ತಜ್ಞರು ಬಳಸುತ್ತಾರೆ. ಈ ಬಗೆಯ ವೈವಿಧ್ಯತೆಯು ಕೃಷಿಯನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡುತ್ತದೆ ಎಂಬುದು ಇವರ ವಾದ.ಈ ಪದ್ಧತಿಯನ್ನು ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳ, ತಕ್ಕ ಮಟ್ಟಿಗೆ ನೀರಾವರಿ, ಬಂಡವಾಳವಿರುವ ದೊಡ್ಡ ಹಿಡುವಳಿಗಳ ರೈತರು ಸಾಮಾನ್ಯವಾಗಿ ಅಳವಡಿಸಿಕೊಂಡಿದ್ದಾರೆ, ಕರ್ನಾಟಕದಲ್ಲಿ, ಈ ವಿಧಾನಕ್ಕೆ ಸಧ್ಯದಲ್ಲಿ ಹೆಚ್ಚು ಉತ್ತೇಜನ ಸಿಗುತ್ತಿದೆ.

ಹಲವು ಬಾರಿ, ಈ ಎರಡು ಅರ್ಥಗಳು ಪ್ರಾಯೋಗಿಕವಾಗಿ ಒಂದಕ್ಕೊಂದು ವ್ಯತಿರಿಕ್ತವಾಗುತ್ತವೆ . ಆದ್ದರಿಂದಲೇ, ಸಂಶೋಧನೆಗಳೂ ಕೂಡ ದೇಸಿ/ನೈಸರ್ಗಿಕ ಹಾಗು ಆಧುನಿಕ/ಆರ್ಥಿಕ ಎಂಬ ವಿಂಗಡನೆಗಳಲ್ಲಿ ಕಳೆದುಹೋಗಿವೆ. ಜೈವಿಕ ವೈವಿಧ್ಯತೆಯನ್ನು ಅರ್ಥೈಸಿಕೊಂಡಂತೆ, ಅನುಷ್ಠಾನಕ್ಕೆ ತಂದಂತೆ ಅದರ ಲಾಭಗಳು ನಮಗೆ ಕಂಡುಬರುತ್ತದೆ. ಅಂದರೆ, ವೈವಿಧ್ಯತೆಯ ಜೊತೆಗೆ, ವೈವಿಧ್ಯತೆಯ ಹಿಂದಿರುವ ಆಶಯ, ತಂತ್ರಜ್ಞಾನ, ಪ್ರಾದೇಶಿಕ ಅನುಭವಗಳೂ ಕೂಡ ಮುಖ್ಯವಾಗುತ್ತದೆ. ಕೃಷಿಗಿರುವ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ಜೊತೆಯಲ್ಲಿಯೇ, ಕೃಷಿಯ ನೈಸರ್ಗಿಕ ಕೆಡಕುಗಳೂ ಕೂಡ ಇಂದು ದೊಡ್ಡ ಸವಾಲಾಗಿ ನಿಂತಿವೆ. ಕೃಷಿಯಲ್ಲಿ ಜೈವಿಕ ವೈವಿಧ್ಯತೆ ಸ್ವಲ್ಪ ಮಟ್ಟಿಗಾದರೂ ಈ ಎರಡೂ ಸವಾಲುಗಳನ್ನು ಉತ್ತರಿಸಬಲ್ಲದಾಗಿದೆ. ಆದರೆ, ವೈವಿಧ್ಯತೆಯನ್ನು ಸೂಕ್ತವಾಗಿ ಬಳಸಿ ಅದರ ಪ್ರಯೋಜನ ಪಡೆಯಲು ಕೃಷಿಯ ಜಾನಪದ ಜ್ಞಾನವನ್ನೂ, ಆಧುನಿಕ ತಂತ್ರಜ್ಞಾನವನ್ನು ಹೇಗೆ ಬೆರೆಸಬಹುದು, ಮತ್ತು ಇವುಗಳ ಸಮಗ್ರ ಪರಿಣಾಮಗಳೇನು ಎಂಬುದನ್ನು ಸಂಶೋಧಿಸಬೇಕಾಗಿದೆ. ಈ ನಿಟ್ಟಿನಲ್ಲಿ, ಅಭಿವೃದ್ಧಿಯೆಂದರೆ ಹೀಗೇ ಇರಬೇಕು ಎಂಬ ಸಂಕುಚಿತ ಮನೋಭಾವ, ಅಭಿವೃದ್ಧಿಗಿರುವ ಎಲ್ಲಾ ಮಾರ್ಗಗಳ ಸದುಪಯೋಗವನ್ನು ಪಡೆಯುವುದಕ್ಕೆ ಅಡ್ಡಿಯಾಗಬಲ್ಲದು. ಆದ್ದರಿಂದ ಕೃಷಿಯ ಸಂಶೋಧನೆಯ ಮಟ್ಟದಲ್ಲಾದರೂ ಮುಕ್ತ ಮನೋಭಾವ, ಸಮಾಜದ ಒಳಿತಿಗಾಗಿ ಅವಶ್ಯವಾಗಿದೆ.