ವಿಶೇಷ ಆರ್ಥಿಕ ವಲಯಗಳು
ಪಶ್ಚಿಮ ಬಂಗಾಳದ ಸಿಂಗೂರು ಮತ್ತು ನಂದೀಗ್ರಾಮದ ದುರಂತಗಳಿಂದ 'Special Economic Zones' (SEZ) ಅಥವ 'ವಿಶೇಷ ಆರ್ಥಿಕ ವಲಯಗಳು' ಇತ್ತೀಚಿನ ದಿನಗಳಲ್ಲಿ ಕುಖ್ಯಾತವಾಗಿವೆ. ಇವುಗಳು ಯಶಸ್ವಿಯಾಗುತ್ತವೋ ಇಲ್ಲವೋ,ನಮ್ಮ ದೇಶದ ಆರ್ಥಿಕ ನೀತಿಗಳ ಇತಿಹಾಸದಲ್ಲಿ ಇವುಗಳ ರಚನೆ ಒಂದು ದೊಡ್ಡ ಮೈಲಿಗಲ್ಲಾಗಲಿದೆ.
ಭಾರತದ ಆರ್ಥಿಕ ಉದಾರೀಕರಣ ನೀತಿಯ ಮತ್ತೊಂದು ಘಟ್ಟವೇ ಈ SEZ.ದೇಶದ ರಫ್ತು ಉತ್ಪನ್ನಗಳನ್ನು ಹೆಚ್ಚಾಗಿಸಲು, ಕೈಗಾರಿಕೋದ್ಯಮಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ನಮ್ಮ ಉದ್ಯಮಗಳಲ್ಲಿ ವಿದೇಶೀ ಬಂಡವಾಳ ಹೂಡುವಿಕೆಯನ್ನು ಹೆಚ್ಚಿಸುವುದು, ಇವೇ ವಿಶೇಷ ಆರ್ಥಿಕ ವಲಯಗಳ ರಚನೆಯ ಹಿಂದಿರುವ ಗುರಿಗಳು. ದೇಶದೊಳಗೂ, ಅಂತರ್-ರಾಷ್ಟ್ರೀಯ ಮಟ್ಟದಲ್ಲೂ ಎಷ್ಟು ಹೆಚ್ಚು ವಾಣಿಜ್ಯ ವಾಹಿವಾಟಾಗುವುದೋ, ದೇಶಕ್ಕೆ ಅಷ್ಟು ಒಳ್ಳೆಯದು, ಇದಕ್ಕಾಗಿ ಸ್ವಲ್ಪವಾದರೂ ಕ್ರುಶಿ ವಲಯದ ತ್ಯಾಗ ಅಗತ್ಯ, ಎಂಬ ನಂಬಿಕೆಯನ್ನಾಧಾರಿಸಿ ಹುಟ್ಟಿರುವ ರಚನೆಗಳಿವು. ಭಾರತ ಈ ನಿಟ್ಟಿನಲ್ಲಿ ಎಷ್ಟು ದೊಡ್ಡ ಹೆಜ್ಜೆಯನ್ನಿಟಿದೆಯೆಂದರೆ, ಈ ಪ್ರಯತ್ನದಲ್ಲಿ ನಾವು ವಿಫಲವಾದರೆ, ಇಡೀ ದೇಶಕ್ಕೆ ಬಹಳ ದೊಡ್ಡ ನಷ್ಟವಾಗಲಿದೆ. ವಿಶೇಷ ಆರ್ಥಿಕ ವಲಯ ಎಂದರೇನು, ಅದಕ್ಕೇ ಬೇಕಾದ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕಿದೆಯೇ, ದೇಶದ ಆರ್ಥಿಕ,ಸಾಮಾಜಿಕ ಮತ್ತು ನೈಸರ್ಗಿಕ ಸ್ಥಿತಿಗತಿಗಳ ಮೇಲೆ ಅದರ ಪರಿಣಾಮಗಳೇನು, ಇವಗಳನ್ನೆಲ್ಲ ಇಡಿಯಾಗಿ ಬರೆಯುವುದು ಅಸಾಧ್ಯವಾದ್ದರಿಂದ,ಇಲ್ಲಿ SEZ ಅಂದರೇನು ಹಾಗು ಕೃಷಿಯ ಮೇಲೆ ಅದರ ಪರಿಣಾಮಗಳೇನು ಎಂಬುದರ ಬಗ್ಗೆ ಬರೆಯಲು ಪ್ರಯತ್ನಿಸುವೆ.
ವಿಶೇಷ ಆರ್ಥಿಕ ವಲಯವು, ಹೆಚ್ಚು ಕಡಿಮೆ ಒಂದು ಸ್ವತಂತ್ರ ಪ್ರದೇಶವಿದ್ದಂತೆ. ಈ ಪ್ರದೇಶದಲ್ಲಿರುವ ಉದ್ದಿಮೆಗಳಿಗೆ ವಿಶೇಷ ಸವಲತ್ತುಗಳೂ,ಅಧಿಕಾರಗಳೂ ಇರುತ್ತವೆ. ಉದಾಹರಣೆಗೆ, ಭಾರತದಲ್ಲಿ ರಭಸದಿಂದ ಕಾರ್ಯರೂಪಕ್ಕೆ ಬರುತ್ತಿರುವ ಈ ವಲಯಗಳಲ್ಲಿ ಮುಖ್ಯವಾದ ಸವಲತ್ತುಗಳು ಕೆಳಗಿವೆ,
೧. ಉದ್ದಿಮೆಗಳಿಗೆ ಐದು ವರ್ಷಗಳ ತನಕ ಆದಾಯ ತೆರಿಗೆಯೇ ಇರುವುದಿಲ್ಲ, ಸೇಲ್ಸ್ ತೆರಿಗೆ, ಸರ್ವಿಸ್ ತೆರೆಗೆ ಇರುವುದಿಲ್ಲ
೨. ಆ ಉದ್ದಿಮೆಗಳು ಅಮದು ಮಾಡಿಕೊಳ್ಳುವ ಬಗ್ಗೆ ಯಾವುದೇ ತರದ ಅನುಮತಿ ಬೇಕಿಲ್ಲ, ಅಡಚಣೆಗಳಿರುವುದಿಲ್ಲ,
೩. ಹಲವು ಉದ್ದಿಮೆಗಳಲ್ಲಿ ಶೇಕಡಾ ನೂರರಷ್ಟು ವಿದೇಶಿ ಬಂಡವಾಳ ಬಳಕೆಗೂ ಅನುಮತಿ,
೪. ಕೈಗಾರಿಕೆಗಳು, ಉದ್ಯಮಗಳು, ವಾಣಿಜ್ಯ ಸಂಸ್ಥೆಗಳು, ಬ್ಯಾಂಕುಗಳು, ಮಾಹಿತಿ ತಂತ್ರಜ್ಞಾನದ ಉದ್ದಿಮೆಗಳು ಹೀಗೆ ವಿವಿಧ ಉದ್ಯಮಗಳಿಗೆ ಈ ಪ್ರದೇಶದಲ್ಲಿ ಇರಲು ಅವಕಾಶ,
೫. ಯಾವುದೇ ಉದ್ಯಮ ಶುರುಮಾಡುವಾಗ ಬೇಕಿರುವ ಪರಿಸರದ ಮೇಲಿನ ಪರಿಣಾಮಗಳ ಸಮೀಕ್ಷೆಗಳೂ ಇಲ್ಲಿ ಬೇಕಿಲ್ಲ, ಜೊತೆಗೆ ಕನಿಷ್ಠ ಮೇಲ್ವಿಚಾರಣೆಯೂ ಇರುವುದಿಲ್ಲ,
೬. ಈ ವಲಯಗಳಿಗೆ ಬೇಕಾದ ವಿದ್ಯುತ್ ಹಾಗು ಇತರ ಸಂಪನ್ಮೂಲಗಳಿಗೂ ತೆರಿಗೆ ಇರುವುದಿಲ್ಲ,
೭. ವಿಶೇಷ ಆರ್ಥಿಕವಲಯಗಳನ್ನು ನಿರ್ಮಿಸುವವರಿಗೂ ಕೂಡ ಇದೇ ಬಗೆಯ ಹಲವು ಸವಲತ್ತುಗಳು
ಒಟ್ಟಿನಲ್ಲಿ, ಇಂದಿನ ಪರಿಸ್ಥಿತಿಯಲ್ಲಿ ಈ ಪ್ರದೇಶಗಳಲ್ಲಿ ಬಂಡವಾಳ ಹೂಡುವರನ್ನು,ಭಾರತೀಯ, ವಿದೇಶಿ ಉದ್ಯಮಗಳನ್ನು ಪ್ರತಿಯೊಂದು ರಾಜ್ಯವೂ ತನ್ನ ಕೈಲಾದಷ್ಟು ಆಸೆ ತೋರಿ ಬರಮಾಡಿಕೊಳ್ಳುತ್ತಿವೆ. ಈ ಪೈಪೋಟಿಯಿಂದ, ಮೇಲೆ ಹೇಳಿರುವ ಸವಲತ್ತುಗಳೊಂದಿಗೆ ಮತ್ತಷ್ಟೂ ಹೆಚ್ಚು ಸೌಲಭ್ಯಗಳು ಈ ವಲಯಗಳಲ್ಲಿ ಸಿಗಲಿವೆ. ಉದಾಹರಣೆಗೆ, ಪಶ್ಚಿಮ ಬಂಗಾಳದ ಸರ್ಕಾರವು ಸಿಂಗೂರಿನಲ್ಲಿ ಟಾಟಾ ಕಂಪನಿಗೆ ಅತಿ ಅಗ್ಗದಲ್ಲಿ ಭೂಮಿಯನ್ನು ಭೋಗ್ಯಕ್ಕೆ ಕೊಡುವುದು, ೧% ಬಡ್ಡಿದರದಲ್ಲಿ ಕಂಪನಿಗೆ ಸಾಲವನ್ನೂ ಕೊಡುವುದು ಹೀಗೆ, ಹತ್ತು ಹಲವು ಸವಲತ್ತುಗಳು. ಈ ತರಹದ ಸುಮಾರು ೮ ವಿಶೇಷ ಆರ್ಥಿಕ ವಲಯಗಳು ಭಾರತದಲ್ಲಾಗಲೇ ಚಾಲ್ತಿಯಲ್ಲಿವೆ. ಒಂದು ಅಧ್ಯಯನದ ಪ್ರಕಾರ ಇನ್ನೈದು ವರ್ಷಗಳಲ್ಲಿ ಹಲವು ವಿಶೇಷ ಆರ್ಥಿಕ ವಲಯಗಳ ಸೃಷ್ಟಿಗೆ ಭಾರತವು ೧.೭೫ ಲಕ್ಷ ಟಿ ರೂ.ಗಳನ್ನು ಖರ್ಚ್ ಮಾಡಲಿದೆಯಂತೆ. ಇಷ್ಟೆಲ್ಲ ಸವಲತ್ತುಗಳನ್ನು ನೀಡಿದ ಮೇಲೆ ಆಗುವ ಪ್ರಯೋಜನವಾದರೂ ಏನು, ಇದೇ ದುಡ್ಡಿನಲ್ಲಿ ಭಾರತದ ೩೦ ಕೋಟಿಗೂ ಹೆಚ್ಚಿರುವ ಬಡ ಜನತೆಗೆ ನೇರವಾಗಿ ಸಹಾಯ ಮಾಡಬಾರದೇಕೆ, ಹೀಗೆ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.
ವಿಶೇಷ ಆರ್ಥಿಕ ವಲಯಗಳ ಮತ್ತೊಂದು ವಿವಾದಾಸ್ಪದ ಅಂಶ, ಅದಕ್ಕೆ ಬೇಕಾದ ಭೂಮಿಯ ಸ್ವಾಧೀನ. ಉದ್ಯಮಗಳು ಫಲವತ್ತಾದ ಭೂಮಿಗಳನ್ನು ಕಬಳಿಸುತ್ತವೆ ಎಂಬ ವಾದ ಇದೆ. ಇದು ನಿಜವಾಗಿಯೇ ಇರಬೇಕೆಂದೇನು ಇಲ್ಲ. ಒಟ್ಟಿನಲ್ಲಿ ಉದ್ದಿಮೆಗಳು ದೊಡ್ಡ ದೊಡ್ಡ ಊರುಗಳ, ಹೆದ್ದಾರಿಗಳ ಹತ್ತಿರವಿರಬೇಕು, ಭೌತಿಕ ಸಂಪನ್ಮೂಲಗಳಿಗೆ ಕೊರತೆಯಿರಬಾರದು. ಹಾಗಿದ್ದ ಭೂಮಿ ಬಂಜರಾದರೂ ಒಂದೆ, ಫಲವತ್ತಾಗಿದ್ದರೂ ಒಂದೆ ಅವರಿಗೆ. ಈ ಭೂಸ್ವಾಧೀನದಿಂದ ಭಾರತದ ಕೃಷಿಗೆ ಪೆಟ್ಟು ಬೀಳುತ್ತದೆ ಎಂಬ ವಾದವೂ ಇದೆ. ಭಾರತದ ಒಟ್ಟು ಕೃಷಿ ಭೂಮಿಯ ವಿಸ್ತೀರ್‍ಣವನ್ನು ನೋಡಿದಾಗ SEZಗಳಿಗಾಗಿ ಕೃಷಿಯಿಂದ ಭೂಮಿಯನ್ನು ಬಳಸಿಕೊಂಡರೆ ರಾಜ್ಯ ಮಟ್ಟದ ಕೃಷಿಯಲ್ಲಿ ಹೆಚ್ಚಿನ ಬದಲಾವಣೆ ಕಾಣದೇ ಇರಬಹುದು. ಹಾಗಾಗಿ, ಇದರಿಂದ ದೇಶದ ಆಹಾರ ಸುರಕ್ಷತೆಯ ಪರಿಸ್ಥಿತಿಯು ಬಿಗಡಾಯಿಸದೇ ಇರಬಹುದು. ಆದರೂ ಪ್ರತಿಯೊಬ್ಬ ರೈತನಿಗೆ ಆಗುವ ಹಾನಿ, ಸಿಗುವ ಪರಿಹಾರಗಳ ಬಗ್ಗೆ ಯೋಚಿಸಲೇ ಬೇಕಾಗುತ್ತದೆ.
ಭಾರತದಲ್ಲಿರುವ ಭೂ ಸ್ವಾಧೀನ ಕಾನೂನು ರಚಿತವಾದದ್ದು ೧೮೯೪ರಲ್ಲಿ, ಬ್ರಿಟೀಷರ ಕಾಲದಲ್ಲಿ! ಈ ಕಾನೂನಿಗೆ ೧೯೮೪ರಲ್ಲಿ ಮತ್ತು ಮುಂದೆ, ಹಲವು ಪ್ರಮುಖ ಬದಲಾವಣೆಗಳಾಗಿವೆ. ಆದರೆ, ನಿಜವಾದ ವಿವಾದವಿರುವ ವಿಷಯಗಳಿಗೆ ಪರಿಹಾರವಿನ್ನೂ ಬಂದ ಹಾಗಿಲ್ಲ. ಈ ಕಾನೂನಿನ ಪ್ರಕಾರ, ಸರ್ಕಾರವು ಸ್ವಾಧೀನಕ್ಕೆ ತೆಗೆದುಕೊಳ್ಳುವ ಭೂಮಿಯ ಬೆಲೆಯನ್ನು ನಿರ್ಧರಿಸುವಾಗ, ಭೂಮಿಯ ಇಂದಿನ ಬಳಕೆಯ ಆಧಾರದ ಮೇಲೆಯೇ ಬೆಲೆಯನ್ನು ನಿರ್ಧರಿಸಬೇಕು. ಭೂಮಿಯನ್ನು ಕೊಂಡ ಮೇಲೆ ಅದರ ಬಳಕೆ ಹೇಗಾಗುತ್ತದೆ ಎಂಬ ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಬಾರದು. ಉದಾಹರಣೆಗೆ, ಮೈಸೂರಿನ ಹತ್ತಿರದ ಹೊರ ಪ್ರದೇಶದಲ್ಲಿ ಒಂದು ಎಕರೆ ಜಮೀನಿಗೆ, ಇಂದು ಮಾರುಕಟ್ಟೆಯಲ್ಲಿ ಕಮ್ಮಿ ಎಂದರೂ ೨೫ - ೩೦ ಲಕ್ಷ ರೂ. ಬೆಲೆಯಿದೆ. ಆದರೆ ಸರ್ಕಾರ ಭೂಸ್ವಾಧೀನಪಡಿಸಿಕೊಂಡರೆ, ಅಲ್ಲಿ ಯಾವ ಉದ್ಯಮವಾದರೂ ಬರಲಿ, ಆ ಒಂದೆಕರೆ ಜಮೀನಿಗೆ ಸಿಗುವ ಬೆಲೆ ೬-೭ ಲಕ್ಷ ರೂ.ಗಳು! ಆದರೆ, ನಮ್ಮ ನಾಯಕರು ಮನಸ್ಸು ಮಾಡಿದರೆ ರೈತನಿಗಾಗುವ ಈ ಅನ್ಯಾಯವನ್ನು ತಡೆಯಬಹುದು. ಉದಾಹರಣೆಗೆ,ಸಿ.ಎಂ ಕ್ಷೇತ್ರವಾದ ರಾಮನಗರದ ಬಿಡದಿಯ ಬಳಿ ಸರ್ಕಾರವು ಭೂಮಿ ಕಳೆದುಕೊಳ್ಳುವ ರೈತರಿಗೆ ಹಲವು ಲಾಭದಾಯಕ ಅವಕಾಶಗಳನ್ನು ಒದಗಿಸಿದೆ; ಆದರೆ ಇದಕ್ಕೆ ಸರ್ಕಾರದಲ್ಲೇ ವಿರೋಧವೂ ಇದೆ.
ಇತ್ತೀಚೆನ ಚರ್ಚೆಗಳಲ್ಲಿ ಕಂಡುಬರುತ್ತಿರುವ ಹಾಗೆ, ಉದ್ಯಮಿಗಳನ್ನು ನೇರವಾಗಿ ರೈತರ ಜೊತೆ ವ್ಯವಹರಿಸಲು ಬಿಟ್ಟರೆ, ಅದು ರೈತನ ದೃಷ್ಟಿಯಲ್ಲಿ ಒಳ್ಳೆಯದೆ. ರೈತರಿಗೆ ಭೂಮಿಗೆ ತಕ್ಕ ಬೆಲೆ ದೊರೆಯಬಹುದು. ಆದರೆ ಈ ಸುಲಭ ಪರಿಹಾರಕ್ಕೆ ದೊಡ್ಡ ಅಡ್ಡಿಯಿದೆ. ಸಾವಿರ ಎಕರೆ ಭೂಮಿ ಬೇಕಾದರೆ ಉದ್ಯಮಿಗಳು ಯಾರ ಜೊತೆ ವ್ಯವಹರಿಸಬೇಕು!? ವಿವಿಧ ರಾಜ್ಯ ಸರ್ಕಾರಗಳು ಈ ತರಹದ ಉದ್ಯಮಗಳನ್ನು ತಮ್ಮತ್ತ ಸೆಳೆಯಲು ತುದಿಗಾಲ ಮೇಲೆ ನಿಂತಿರುವಾಗ ಈ ಉದ್ಯಮಗಳು ಇಲ್ಲೇ ನೂರಾರು ರೈತರ ಜೊತೆ ವ್ಯವಹರಿಸುತ್ತ ಏಕೆ ಇರಬೇಕು, ಈ ರಾಜ್ಯವಲ್ಲದಿದ್ದರೆ ಮತ್ತೊಂದು ಎಂದು ಹಾರಿಹೋಗಬಹುದು.
ಈ ಎಲ್ಲ ಕಗ್ಗಂಟುಗಳಿಂದಾಗಿ ವಿಶೇಷ ಆರ್ಥಿಕ ವಲಯಗಳಿಗಾಗಿ ಸರ್ಕಾರ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯು ವಿವಾಸಾಸ್ಪದವಾಗಿ ಹೋಗಿದೆ. ಸರ್ಕಾರವು ಅತ್ತ ಒಂದರ ಮೇಲೊಂದು ಸವಲತ್ತನ್ನು ಉದ್ಯಮಗಳಿಗೆ ಕೊಡುತ್ತಿದೆ, ಇತ್ತ, ರೈತರಿಗೆ ಅವರ ಭೂಮಿಗೆ ತಕ್ಕ ಬೆಲೆ ಕೊಡಲು ಹಿಂದು ಮುಂದು ನೋಡುತ್ತಿದೆ. ಇನ್ನು ಕಂಪನಿಗಳು ಸರ್ಕಾರದ ವಿಶೇಷ ಸವಲತ್ತುಗಳನ್ನು ಅನುಭವಿಸಲು ಸಾಧಾರಣ ವಲಯಗಳಿಂದ ಈ ವಿಶೇಷ ಆರ್ಥಿಕ ವಲಯಕ್ಕೆ ಸೇರಲು ಹವಣಿಸಬಹುದು, ವಿಶೇಷ ಆರ್ಥಿಕ ವಲಯಗಳು ಬೇಕೆ ಬೇಕೆಂದು ಒತ್ತಾಯವೂ ಹೇರಬಹುದು.
ಈ ಎಲ್ಲ ವಿಷಯಗಳ ಬಗ್ಗೆ ಯೋಚಿಸಿದಾಗ ನಮಗೆ ಈ SEZಗಳು, ಅದೂ ಇಷ್ಟೋಂದು SEZಗಳು ಬೇಕೆ ಎಂಬ ಪ್ರಶ್ನೆ ಬರುತ್ತದೆ. ಇಷ್ಟರಲ್ಲೇ, ಕರ್ನಾಟಕದ ಹಲವೆಡೆ ಈಗಾಗಲೇ ಭೂಸ್ವಾಧಿನಕ್ಕೆ ನೋಟೀಸ್ ಬರಲಾರಂಭಿಸಿವೆ. ಹಲವು ರೈತರು ಇದಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟುಗಳೂ ಸ್ವಾಧೀನದ ಪರ/ವಿರುದ್ಧ ಹೇಳಿಕೆ ನೀಡುತ್ತಿವೆ. ಕೆಲವು ಸಂದರ್ಶನಗಳನ್ನು ನೋಡಿದರೆ, ಮೊದಲೆ ಸಂಕಷ್ಟದಲ್ಲಿರುವ ನಿರ್ಬಲ ರೈತನಿಗೆ ಬೇಸಾಯ ಖಂಡಿತಾ ಬೇಕಾಗಿಲ್ಲ, ಆದ್ದರಿಂದ ಹೆಚ್ಚು ಮಾತನ್ನಾಡಲೂ ಆಗದೇ ಬಂದ ಬೆಲೆಗೆ ರೈತ ಭೂಮಿಯನ್ನು ಕೊಟ್ಟರೂ ಕೊಟ್ಟ ಅನ್ನಿಸುತ್ತಿದೆ. ಅಥವ, ತನ್ನ ಭೂಮಿಯ ನಿಜವಾದ ಮೌಲ್ಯವನ್ನು ಪಡೆಯುವಲ್ಲಿ ಹೇಗಾದರೂ ಮಾಡಿ ರೈತನು ಯಶಸ್ವಿಯೂ ಆಗಬಹುದು. ಆದರೆ ರೈತನ ಜೀವನ ನಾಶವಾದರೆ ಅಥವ ವಿಶೇಷ ಆರ್ಥಿಕ ವಲಯಗಳು ಬಿದ್ದುಹೋದರೆ ಅದಕ್ಕೆ ಹೊಣೆ ಸರ್ಕಾರವೇ,ಉದ್ಯಮಗಳೇ, ಸುಮ್ಮನಿರುವ ಸಾರ್ವಜನಿಕರೆ ಅಥವ ಇದಕ್ಕೂ ರೈತನೇ ಹೊಣೆಯೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.
ಈ ಲೇಖನದಲ್ಲಿ
೧. India Together ಎಂಬ ವೆಬ್-ಸೈಟಿನಲ್ಲಿ ಡಿಸೆಂಬರ್ ೬, ೨೦೦೬ರಲ್ಲಿ ಪ್ರಕಟಗೊಂಡ ದೇವೆಂದರ್ ಶರ್ಮ ಮತ್ತು ಭಾಸ್ಕರ್ ಗೋಸ್ವಾಮಿಯವರ "The New Maharajas" ಎಂಬ ಸಂಪಾದಕೀಯ, ಮತ್ತು
೨. Economic and Political Weekly ವಾರಪತ್ರಿಕೆಯಲ್ಲಿ ಏಪ್ರಿಲ್ ೨೧, ೨೦೦೭ರಲ್ಲಿ ಪ್ರಕಟಗೊಂಡ ಅಭಿರೂಪ್ ಸರ್ಕಾರರ "Development and Displacement: Land Acquisition in Bengal" ಎಂಬ ವಿಶೇಷ ಲೇಖನ, ಮತ್ತು The Hindu, Deccan Herald, ಕನ್ನಡಪ್ರಭ ಮುಂತಾದ ಹಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳ ಮಾಹಿತಿಯನ್ನು ಉಪಯೋಗಿಸಲಾಗಿದೆ.






ಶ್ಯಾಮ ಕಶ್ಯಪರೆ,
ಮುಖ್ಯವಾದ ವಿಷಯವನ್ನು ಇಲ್ಲಿ ಚರ್ಚಿಸಿದ್ದೀರಿ. ಧನ್ಯವಾದಗಳು.
ನನಗ್ಯಾಕೋ ಈ sez ಗಳ ಬಗ್ಗೆ ಅನುಮಾನವೇ. ನಮ್ಮ ದೇಶದಲ್ಲಿ ಯಾವಾಗಲೂ ಇಂಥವುಗಳು ಚಲಾವಣೆಗೆ ಬರುವಾಗ ರೈತರನ್ನು ಅಡಕೊತ್ತಿನಲ್ಲಿ ಸಿಕ್ಕಿಸುವ ಪ್ರಮೇಯವೇ ಜಾಸ್ತಿಯಲ್ಲವೆ? ಈ ವಿಷಯದಲ್ಲಿ ನೀವು ಹೇಳಿದಂತೆ ರೈತರಿಗೆ ದೇಶದ ಉದ್ದಗಲಕ್ಕೂ ತೊಂದರೆ ಇಲ್ಲದಿರಬಹುದು. ಆದರೂ ನಂದಿಗ್ರಾಮದಂತೆ ಉಳಿದ ಕಡೆಯೂ ಕೆಲವು ರೈತರಾದರೂ ತೊಂದರೆಗೆ ಸಿಕ್ಕಿಕೊಳ್ಳುವ ಪರಿಸ್ಥಿತಿ ರೂಪಗೊಳ್ಳುವುದು ಅನಿವಾರ್ಯದಂತೆ ಕಾಣುತ್ತಿದೆ ಅಲ್ಲವೆ?
ಇನ್ನೊಂದು ಅನುಮಾನ: ಈ ವಲಯಗಳ ಬಗ್ಗೆ ಎಷ್ಟು ಕಾಲದಿಂದ ಯೋಚನೆಗಳಿದೆಯೋ ಗೊತ್ತಿಲ್ಲ. ಆದರೆ, ಮಾಹಿತಿ ತಂತ್ರಜ್ಞಾನಕ್ಕೆ ಸುಂಕ ವಿನಾಯಿತಿ ಕೊನೆಗೊಳ್ಳುವ ಕಾಲಕ್ಕೆ ಸರಿಯಾಗಿ ಇದು ರೂಪಿತವಾಗುತ್ತಿದೆ ಅನ್ನಿಸುತ್ತಿಲ್ಲವೆ? ಇದರ ಹರಹು ಹೆಚ್ಚಿದೆ ಎಂದು ನನಗೆ ಗೊತ್ತು. ಆದರೂ ನನಗೆ ಮಾಹಿತಿ ತಂತ್ರಜ್ಞಾನದ ಒತ್ತಡ ಇದ್ದೀತು ಎಂಬ ಅನುಮಾನವಿದೆ. ಮತ್ತು ಸುಂಕ ವಿನಾಯಿತಿಯ ಬಗ್ಗೆ ನೀವು ಹೇಳಿದ ಐದು ವರ್ಷಗಳು, ಮಾಹಿತಿ ತಂತ್ರಜ್ಞಾನಕ್ಕೆ ಹತ್ತು ವರ್ಷ, ಮೇಲೈದು ವರ್ಷ ರಿಯಾಯಿತಿ ಒಟ್ಟು 2024ರವರೆಗೆ (2009ರಿಂದ) ಎಂದು ಓದಿದ ನೆನಪು.
ನನ್ನ ಅನುಮಾನಗಳು ಸರಿಯೆ?
ಅನಿವಾಸಿ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರತಿಯೊಂದು ರಾಜ್ಯವೂ ತನ್ನ sez ಗಳಿಗೆ ತನಗೆ ಬೇಕಾದಂತೆ ಹೆಚ್ಚಿನ ಸವಲತ್ತುಗಳನ್ನು ಕೊಡುವ ಅವಕಾಶವಂತೂ ಇದ್ದೇ ಇದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳ ಒತ್ತಡ ಕೇವಲ ಕರ್ನಾಟಕ ಸರ್ಕಾರದ ಮೇಲಿದ್ದೀತು. ಇತರ ರಾಜ್ಯಗಳ ವಿಶೇಷ ಆರ್ಥಿಕ ವಲಯಗಳಲ್ಲಿ ಮಾ.ತಂ. ಉದ್ಯಮಗಳಿಗಿಂತ ಇತರ ಉತ್ಪಾದನಾ ಉದ್ಯಮಗಳೇ ಜಾಸ್ತಿ. ಆದ್ದರಿಂದ ಮಾ.ತಂ ಸಂಸ್ಥೆಗಳಿಗೆ ಇನ್ನೂ ವಿಶೇಷ ಸವಲತ್ತುಗಳನ್ನು ಕೊಡುವುದನ್ನು ಇತರೆ ಉದ್ಯಮದವರು ಒಪ್ಪಲಾರರು ಎಂದುಕೊಂಡಿದ್ದೇನೆ.
ಕರ್ನಾಟಕದಲ್ಲಿ ವಿಶೇಷ ಆರ್ಥಿಕ ವಲಯಗಳಲ್ಲಿ ಹೆಚ್ಚಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೇ ಇವೆ. ವಿಶೇಷ ಆರ್ಥಿಕವಲಯಗಳಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಇನ್ನಷ್ಟೂ ಸವಲತ್ತು ಸಿಗುವುದರ ಬಗ್ಗೆ ನಾನು ತಿಳಿದಿಲ್ಲ. ಆದರೆ, ಇರುವ ಸಂಸ್ಥೆಗಳು ವಿಶೇಷ ಆರ್ಥಿಕ ವಲಯಗಳಿಗೆ ಹೊರಡಲು ಸಂಚು ಹಾಕುತ್ತಿದ್ದಾರೆ ಎಂಬುದನ್ನು ನಾನು ಹಲವೆಡೆ ಕೇಳಿದ್ದೇನೆ.
ಕೃಷಿ ಜಾಗವನ್ನು ಕಳೆದುಕೊಂಡ ರೈತರಿಗೆ ಖಂಡಿತ ತೊಂದರೆಯಾಗುತ್ತದೆ. ಆದರೆ SEZ ಗಳು ಫಲವತ್ತಾದ ಪ್ರದೇಶಗಳನ್ನೇ ನುಂಗುತ್ತವೆ ಎನ್ನುವುದು ಪೂರ್ತಿ ನಿಜವಲ್ಲ ಅಷ್ಟೆ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ