ಕೆರೆಗಳ ಕಾಯಕಲ್ಪ
ಕೃಷಿ ಜೀವನದ ಅತೀ ಮುಖ್ಯ ಭಾಗ ನೀರಾವರಿ. ರೈತರಿಗೆ ನೀರಾವರಿಯ ಪ್ರಾಮುಖ್ಯತೆಯ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅನಾದಿಕಾಲದಿಂದ ಗ್ರಾಮೀಣ ಕರ್ನಾಟಕದ ಬೆನ್ನುಲುಬಾಗಿರುವುದು ಇಲ್ಲಿರುವ ಅಸಂಖ್ಯಾತ ಕೆರೆ ಹೊಳ್ಳಗಳು. ಯಾವುದೇ ಹಳ್ಳಿಗೆ ಬೇಕಾದರೂ ಹೋಗಿ, ಸುತ್ತಮುತ್ತಲಿನಲ್ಲಿ ಒಂದಾದರೂ ಕೆರೆಯನ್ನು ಕಾಣಬಹುದು. ಇಂದು ಈ ಕೆರೆಗಳು ಸದ್ದಿಲ್ಲದೇ ಕ್ಷಿಪ್ರಗತಿಯಲ್ಲಿ ಅವನತಿಯ ಹಾದಿಯಲ್ಲಿ ಸಾಗಿರುವುದು ಆತಂಕಕಾರಿ ಬೆಳವಣಿಗೆ.
ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಹೆಕ್ಟೇರಿಗೂ ಹೆಚ್ಚು ಕೃಷಿ ಪ್ರದೇಶವಿದೆ. ಇದರಲ್ಲಿ ಯಾವುದಾದರೂ ಒಂದು ಬಗೆಯ ನೀರಾವರಿ ಇರುವ ಪ್ರದೇಶ ಕೇವಲ ೨೫ ಲಕ್ಷ ಹೆಕ್ಟೇರುಗಳು. ಇನ್ನೇಷ್ಟೇ ಪ್ರಯತ್ನ ಪಟ್ಟರೂ, ನೀರಿನ ತೀವ್ರ ಅಭಾವವಿರುವುದರಿಂದ ಕರ್ನಾಟಕದಲ್ಲಿ ಹೆಚ್ಚಿನ ಭಾಗದ ಕೃಷಿ ಮಳೆಯಾಶ್ರಿತವಾಗಿಯೇ ಉಳಿಯುತ್ತದೆ, ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಇದ್ದೇ ಇರುತ್ತದೆ.ಇನ್ನೊಂದು ಅಚ್ಚರಿಯೆಂದರೆ, ಇಡೀ ಭಾರತದಲ್ಲಿ, ಬರಪೀಡಿತ ಪ್ರದೇಶಗಳಲ್ಲಿ ಗಮನಿಸಿದಾಗ, ರಾಜಸ್ಥಾನ ಅಗ್ರಸ್ಥಾನದಲ್ಲಿದ್ದರೆ, ನಂತರದ ರಾಜ್ಯ ಕರ್ನಾಟಕವೇ! ಆದ್ದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳು ಜೀವನದ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ.
ಕರ್ನಾಟಕದಲ್ಲಿ ೩೬ ಸಾವಿರ ಅಧಿಕೃತ ಕೆರೆಗಳು ೨೭ ಸಾವಿರ ಹಳ್ಳಿಗಳಲ್ಲಿ ಹರಡಿವೆ. ಇವುಗಳಲ್ಲಿ ಸುಮಾರು ೨೫೦೦ ಕೆರೆಗಳು ಮುಚ್ಚೇ ಹೋಗಿದ್ದು, ಮಿಕ್ಕವು ಹಲವು ಚಿಕ್ಕ, ದೊಡ್ಡ ತೊಂದರೆಗಳಿಂದ ನರಳುತ್ತಿವೆ. ೧೯೫೫ರ ಹೊತ್ತಿಗೆ ಸುಮಾರು ೩ ಲಕ್ಷ ಹೆಕ್ಟೇರು ಭೂಮಿಗೆ ನೀರುಣಿಸುತ್ತಿದ ಕೆರೆಗಳು ೨೦೦೩ರ ಹೊತ್ತಿಗೆ ಕೇವಲ ೧ ೩/೪ ಲಕ್ಷ ಹೆಕ್ಟೇರು ಭೂಮಿಗೆ ನೀರು ಕೊಡಲು ಶಕ್ತವಾಗಿವೆ.ಇದು ಕೆರೆಗಳ ಅವನತಿಗೆ ಹಿಡಿದ ಕನ್ನಡಿಯಂತಿದೆ.ಕೆರೆಗಳು ಈ ಸ್ಥಿತಿಗೆ ಹಲವು ಕಾರಣಗಳಿವೆ. ಕೆರೆಗೆ ನೀರು ಬರುವ ಜಾಡಿನ ನಾಶ, ಕೆರೆಗಳನ್ನು ಒತ್ತುವರಿ, ಅಕ್ರಮ ಸಾಗುವಳಿ,ಕೆರೆಗಳು ಹೂಳೆದ್ದು ಹೋಗಿರುವುದು, ಸುತ್ತಮುತ್ತಲ ಪ್ರದೇಶಗಳಲ್ಲಿ ಅವ್ಯಾಹತವಾಗಿ ಬೋರು, ಬಾವಿಗಳನ್ನು ತೋಡಿರುವುದು, ಅಕ್ರಮವಾಗಿ ಕೆರೆ ನೀರನ್ನು ಎತ್ತುವುದು, ಇವು ಪ್ರಮುಖ ಕಾರಣಗಳು. ಇನ್ನು ಪಟ್ಟಣಗಳಲ್ಲಿ ಕೆರೆಗಳನ್ನು ಮುಚ್ಚಿ ಸೈಟು ಮಾಡುವುದಂತೂ ಸಾಮಾನ್ಯದ ಸಂಗತಿ.
ಮಳೆಯ ಅಭಾವ, ಬರ ಮುಂತಾದ ನೈಸರ್ಗಿಕ ವಿಪರೀತಗಳನ್ನೆದುರಿಸಲು ಮಾನವ ಕಂಡುಕೊಂಡ ಕೆಲವೇ ಕೆಲವು ಸಹಜ, ಪರಿಸರ ಸ್ನೇಹಿ ವಿಧಾನಗಳಲ್ಲಿ ಕೆರೆಗಳು ಒಂದು ಬಗೆ. ಹಿಂದಿನಿಂದಲು ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ನಮ್ಮ ಜನಪದವು ವಿಶೇಷವಾದ ಒತ್ತನ್ನು ನೀಡಿದೆ ಎಂಬುದನ್ನು ಗಮನಿಸಬಹುದು. ನಾವು ನಮ್ಮ ಹಿಂದಿನ ರೀತಿರಿವಾಜುಗಳನ್ನು ಬಲಪಡಿಸಿ, ದೋಷಗಳನ್ನು ತೆಗೆದುಹಾಕುವ ಬದಲು,ಆಧುನಿಕತೆಯ ಸೋಗಿನಲ್ಲಿ, ಇಡೀ systemನೇ ಕಿತ್ತೊಗೆದಿದ್ದೇವೆ. ಕೆರೆಗಳ ವಿಷಯದಲ್ಲೂ ಇದೇ ಬೆಳವಣಿಗೆಯನ್ನು ಗಮನಿಸಬಹುದು. ಹಿಂದಿನಿಂದಲೂ ಕೆರೆಗಳ ನಿರ್ವಹಣೆ ಬಹುಪಾಲಿಗೆ, ಸ್ಥಳೀಯ ಹಳ್ಳಿಯ ಮುಖ್ಯಸ್ಥರೇ ಜವಾಬ್ದಾರರಾಗಿದ್ದರು. ಅವರ ನಿರ್ವಹಣೆಯಲ್ಲಿ ಜಾತಿ-ಮತ ಮುಂತಾದ ವಿಷಯಗಳಲ್ಲಿ ತೊಂದರೆಗಳಿದ್ದರೂ ಕೆರೆಗಳ ಉಳಿವಿಗೇ ಸಂಚಾಕಾರವಿರಲಿಲ್ಲ. ಈ ಪದ್ಧತಿಗಳನ್ನು ಸರಿಪಡಿಸಿ ಸಮುದಾಯದ ಕೆರೆಯ ನಿರ್ವಹಣೆಯನ್ನು ಸುಸ್ಥಿರಗೊಳಿಸುವ ಬದಲು ೧೯೬೫ರಲ್ಲಿ ಸರ್ಕಾರ ಕೆರೆಗಳ ನಿರ್ವಹಣೆಯನ್ನು ತನ್ನ ತೆಕ್ಕೆಗೇ ತೆಗೆದುಕೊಂಡಿತು. ಕೆರೆಗಳ ಅವನತಿಗೆ ಇದೇ ಒಂದು ಪ್ರಮುಖ ಕಾರಣವಾಯಿತು. ಕೆರೆ-ಹೊಳ್ಳ ಸಂಬಂಧಿತ ನಿರ್ಧಾರಗಳು ಹಳ್ಳಿಯನ್ನು ಬಿಟ್ಟು ಹೋದ ಮೇಲೆ, ಅಧಿಕಾರಸ್ಥರ ಜೊತೆ ಹಲವು ಜನ ಕೈ ಮಿಲಾಯಿಸಿ ಕೆರೆಗಳನ್ನು ದುರುಪಯೋಗಪಡಿಸಿಕೊಳ್ಳಲಾರಂಭಿಸಿದರು. ಕೆರೆಗಳ ಮೇಲೆ ಸಮುದಾಯದ ಅಧಿಕಾರ ಹೋಗಿ ಅನೈತಿಕ ಬಲದ ಅಧಿಕಾರ ಬೆಳೆದಿದೆ.
ಒಂದು ಸಮೀಕ್ಷೆಯ ಪ್ರಕಾರ,ಕರ್ನಾಟಕದ ಕೆರೆಗಳಲ್ಲಿ ಪ್ರದೇಶದಲ್ಲಿ ಶೇಕಡ ೧೦ರಷ್ಟು ಈಗಾಗಲೇ ಅನಧಿಕೃತವಾಗಿ ಒತ್ತುವರಿಯಾಗಿದೆ. ಕೆರೆಯ ನೀರನ್ನು ಬಳಸುತ್ತಲೇ ಕೆರೆಯನ್ನು ಒತ್ತುವರಿ ಪಡಿಸಿಕೊಳ್ಳುವ ರೈತರಿಗೂ ಕಮ್ಮಿಯಿಲ್ಲ. ಸರಾಸರಿ ಒಂದು ಕೆರೆಯ ಜಾಗವನ್ನು ೬ ರೈತರು ಕಬಳಿಸಿದ್ದಾರೆ. ಸಣ್ಣ ಕೆರೆಗಳಲ್ಲಿ ಈ ರೀತಿಯ ಒತ್ತಡಗಳು ಇನ್ನೂ ಹೆಚ್ಚು. ತಾತ್ಕಾಲಿಕವಾಗಿ ಕೆರೆ ಬತ್ತಿಹೋದಾಗ ಕೆರೆಯನ್ನು ಸಾಗುವಳಿಗೆ ಬಳಸಿಕೊಳ್ಳುವುದು, ಕೆರೆಯ ಪಕ್ಕದ ಜಾಗವನ್ನು ನಿಧಾನವಾಗಿ ವಿಸ್ತರಿಸಿ ಅಲ್ಲೂ ಬೇಸಾಯ ಮಾಡುವುದು, ಪೂರ್ಣ ಮಟ್ಟದಲ್ಲಿ, ಖಾಯಂ ಆಗಿ ಕೆರೆಯನ್ನು ಮುಚ್ಚಿಹಾಕುವುದು ಹೀಗೆ ಕೆರೆಗಳನ್ನು ಕಬಳಿಸುವುದು ಹಲವು ಸ್ಥರಗಳಲ್ಲಿ ಕಾಣಬಹುದು. ಇನ್ನು ಕೆರೆಗಳನ್ನು ಒತ್ತುವರಿ ಮಾಡುವಲ್ಲಿ, ಸಣ್ಣರೈತ, ದೊಡ್ಡರೈತ, ಮೇಲು-ಕೀಳು,ಜಾತಿ ಇವ್ಯಾವ ಭೇದಗಳೂ ಎದ್ದು ಕಾಣುವುದಿಲ್ಲ. ಕೆರೆಗಳ ದೌರ್ಜನ್ಯದಲ್ಲಿ ಎಲ್ಲರದ್ದೂ ಪಾಲಿದೆ! ಒಟ್ಟಿನಲ್ಲಿ ನಾವೆಲ್ಲರೂ ಸೇರಿ ವಿವಿಧ ಬಗೆಗಳಲ್ಲಿ ನಮ್ಮದೇ ಕೆರೆಗಳನ್ನು ನುಂಗಿಹಾಕಿಕೊಳ್ಳುತ್ತಿದ್ದೇವೆ.
ಕೆರೆಗಳ ಈ ಅವನತಿಯನ್ನು ಕಂಡು ಸರ್ಕಾರ ಎಚ್ಚೆತ್ತುಕೊಂಡಿದೆ. ತಾನು ಮಾಡಿದ ತಪ್ಪನ್ನು ಹೆಸರಿಗಾದರೂ ತಿದ್ದಿಕೊಂಡಿದೆ. ಕೆರೆಗಳ ನಿರ್ವಹಣೆಯನ್ನು ಗ್ರಾಮಪಂಚಾಯ್ತಿಗೆ ಬಿಟ್ಟು ತನ್ನ ಕೈಯನ್ನು ತೊಳೆದುಕೊಂಡಿದೆ. ವರ್ಷಗಟ್ಟಲೆಯಿಂದ ನಡೆದುಕೊಂಡು ಬಂದ ವ್ಯವಸ್ಥೆಯನ್ನು ಬದಲಾಯಿಸಲು ಗ್ರಾಮಸ್ಥರಿಗೆ ಮತ್ತೆ ಅವಕಾಶ ಲಭ್ಯವಾಗಿದೆ. ಕೆರೆಗಳ ಪುನಶ್ಚೇತನಕ್ಕೆ, ಸ್ಥಳೀಯ ಸಾರ್ವಜನಿಕ ನಿರ್ವಣೆಗೆ ಹಲವು ಯೋಜನೆಗಳಡಿ ಗ್ರಾಮಪಂಚಾಯ್ತಿಗಳಿಗೆ ತಕ್ಕ ಮಟ್ಟಿಗೆ ಅಧಿಕಾರವೂ ಆರ್ಥಿಕ ಸೌಲಭ್ಯಗಳೂ ಸಿಗುತ್ತಿವೆ. ಕೆರೆಗಳ ಏರಿಯನ್ನೇರಿಸುವುದು,ನಿಯಮಿತವಾಗಿ ಹೂಳು ತೆಗೆಯುವುದು, ಕೆರೆಗೆ ನೀರು ಹರಿದು ಬರುವ ಜಾಡನ್ನು ಸುಗಮಗೊಳಿಸುವುದು, ಅದರ ಪಾತ್ರದಲ್ಲಿ ಅಕ್ರಮ ಒತ್ತುವರಿಯನ್ನು ತಡೆಯುವುದು, ಇವೆಲ್ಲದರಲ್ಲಿ ಮತ್ತೆ ಸಮುದಾಯವು ಕ್ರಿಯಾಶೀಲವಾಗಿ ಭಾಗವಹಿಸಲು ಅವಕಾಶವು ಸಧ್ಯಕ್ಕೆ ಪುಸ್ತಕದಲ್ಲಾದರೂ ಇದೆ. ಇವುಗಳನ್ನು ಬಳಸಿಕೊಳ್ಳುವುದು, ಬಿಡುವುದು ಆಯಾ ಗ್ರಾಮಗಳಿಗೆ, ಅವುಗಳ ಪಂಚಾಯ್ತಿಗೆ ಬಿಟ್ಟಿದೆ ಅಷ್ಟೆ.
ಪಂಚಾಯ್ತಿಗಳ ಕಾರ್ಯನಿರ್ವಹಣೆಯಲ್ಲಿ ಸಾಧಿಸಬೇಕಾದದ್ದು ಇನ್ನು ಬಹಳಷ್ಟಿದೆ. ಕರ್ನಾಟಕದ ಐದು ಸಾವಿರದಷ್ಟಿರುವ ಪಂಚಾಯ್ತಿಗಳಲ್ಲಿ, ತಮ್ಮ ತಮ್ಮ ಹಳ್ಳಿಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಪೂರ್ಣ ಅಧಿಕಾರ ತೆಗೆದುಕೊಂಡು, ಈ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಪಂಚಾಯ್ತಿಗಳು ಬೆರಳೆಣಿಕೆಯಷ್ಟು. ಇವುಗಳಿದ್ದೂ ಕೆರೆಗಳ ದುರಂತ ಮುಂದುವರೆದೇ ಇದೆ. ಇರುವ ಸಂಪನ್ಮೂಲಗಳನ್ನು,ತಮಗೇ ಸಹಾಯವಾಗುವ ಕೆರೆಗಳನ್ನು ರೈತರು ಏಕೆ ಹೀಗೆ ಹಾಳುಗೆಡುವುತ್ತಿದ್ದಾರೆ ಎಂದು ಅಚ್ಚರಿಯಾಗುತ್ತದೆ. ಇದು ಚಿನ್ನದ ಮೊಟ್ಟೆಯಿಡುವ ಕೋಳಿಯ ಕಥೆಯೇ ಅಥವ ಗ್ರಾಮೀಣ ಜನತೆಗೆ ಕೆರೆಗಳ ಅವಶ್ಯಕತೆಯೇ ಎಲ್ಲವೇ ಇನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ .
ಟಿಪ್ಪಣಿ: Agricultural Economics Research Review,Volume 19, 2006 ನಲ್ಲಿ ಪ್ರಕಟಗೊಂಡ ಪಿ. ತಿಪ್ಪಯ್ಯನವರ "Encroachment of Waterspread area of Tanks in Karnataka: Magnitude, Causes and Consequences" ಎಂಬ ಲೇಖನದ ಅಂಕಿ-ಅಂಶಗಳನ್ನು ಇಲ್ಲಿ ಉಪಯೋಗಿಸಲಾಗಿದೆ.






Recent comments
11 weeks 2 days ago
11 weeks 3 days ago
1 year 4 weeks ago
1 year 4 weeks ago
1 year 8 weeks ago
1 year 8 weeks ago